ಕನಕದಾಸರ ತತ್ವ ಆದರ್ಶ ಪಾಲನೆಗೆ ಸಿಎಂ ಕರೆ

ಬೆಂಗಳೂರು,ನ.೨೩-ದಾಸ ಶ್ರೇಷ್ಠ ಕನಕದಾಸರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ.
ಕನಕದಾಸರು ರಚಿಸಿರುವ ರಾಮಧಾನ್ಯ ಸೇರಿದಂತೆ ಹಲವಾರು ಸಾಹಿತ್ಯಗಳು ಜೀವನದ ದಾರಿ ದೀಪವಾಗಿದೆ. ಕನಕದಾಸರು ಪರಿವರ್ತನೆ ಹರಿಕಾರರು. ರಾಜಶ್ರೇಷ್ಠವನ್ನು ಬಿಟ್ಟು ದಾಸ ಶ್ರೇಷ್ಟರಾಗಿದ್ದಾರೆ.ಅವರ ಸಾಹಿತ್ಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಬಣ್ಣಿಸಿದರು.
ದಾಸ ಶ್ರೇಷ್ಠ ಕನಕದಾಸರ ಜನ್ಮ ದಿನಾಚಾರಣೆ ಅಂಗವಾಗಿ ಶಾಸಕರ ಭವನದ ಆವರಣದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕದಾಸರ ವಿಚಾರಗಳನ್ನು ಇಟ್ಟು ಕೊಂಡು ಬಾಡದಲ್ಲಿ ಅರಮನೆ ಮಾಡಲಾಗಿದೆ. ಕಾಗಿನೆಲೆಯಲ್ಲಿ ಸ್ಮಾರಕ ಮಾಡಲಾಗಿದೆ ಎಂದರು.
ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ, ಸಮಾಜ ಸುಧಾಕರ. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಜೊತೆಗೆ ಸಮಾನತೆ ಪ್ರತಿಪಾದಿಸದವರು ದಾಸ ಶ್ರೇಷ್ಠರು ಕನಕದಾಸರು.ಮಾನವೀಯ ಗುಣಗಳ ಬಗ್ಗೆ ಪ್ರತಿಪಾದಿಸಿ ಸತ್ಯವನ್ನು ಹೇಳಿದ ದಾರ್ಶನಿಕ. ರಾಜ್ಯಾದ್ಯಂತ ದಾಸ ಪದಗಳ ಮೂಲಕ ಜನರಿಗೆ ಜೀವನದ ಸಾರ ತಿಳಿ ಹೇಳಿ ತಿಳಿ ಹೇಳಿ ಬದುಕುವ ದಾರಿ ತೋರಿಸಿದವರು ಎಂದು ಅವರು ಹೇಳಿದರು.
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂದು ಮಾರ್ಮಿಕವಾಗಿ ಜೀವನದ ಸತ್ಯ ಬಿಚ್ಚಿಟ್ಟವರು. ಕನಕದಾಸರ ತ್ರಿಪದಿ ಮತ್ತು ಸಾಹಿತ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಚಿವರಾದ ಗೋವಿಂದ ಕಾರಜೋಳ, ಸುನೀಲ್ ಕುಮಾರ್, ಸಿಸಿ ಪಾಟೀಲ್, ಶಾಸಕ ರೇಣುಕಾಚಾರ್ಯ ಮತ್ತಿತರು ಇದ್ದರು.

ಸೈನಿಕ ಶಾಲೆ ಪ್ರಗತಿಯಲ್ಲಿ
ಇದರ ಜೊತೆ ಜೊತೆಗೆ ಸಂಗೊಳ್ಳಿ ರಾಯಣ್ಣ ಸಮಾಧಿ ಅಭಿವೃದ್ಧಿ, ವಸ್ತು ಸಂಗ್ರಹಾಲ ಮತ್ತು ಸೈನಿಕ ಶಾಲೆಯನ್ನು ಮಾಡುತ್ತಿದ್ದೇವೆ. ಈಗಾಗಲೇ ೧೮೦ ಕೋಟಿ ಖರ್ಚಾಗಿದೆ. ಈ ವರ್ಷ ಇನ್ನೂ ೫೦ ಕೋಟಿ ಖರ್ಚು ಮಾಡಿ, ಯುವಕರಿಗೆ ಆದರ್ಶಪ್ರಾಯ ಮತ್ತು ಶಿಸ್ತಿನ ಜೀವನ ಅಳವಡಿಸಿಕೊಳ್ಳಲು ಎಲ್ಲಾ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಕೇಂದ್ರ ಸಚಿವ ರಾಜನಾಥ್ ಅವರಿಗೆ ಪತ್ರ ಬರೆದಿದ್ದು ಶಾಲೆ ಪೂರ್ಣಗೊಂಡ ನಂತರ ರಕ್ಷಣಾ ಇಲಾಖೆ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಬೇಕು ಎನ್ನುವ ಇಚ್ಚೆ ಇದೆ. ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದರು.