ಕನಕದಾಸರ ಜೀವನ ಮತ್ತು ಸಾಧನೆ ವಿಶ್ವಕ್ಕೆ ಮಾದರಿ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ : ಶಾಸಕ ಲಕ್ಷ್ಮಣ ಸವದಿ

ಅಥಣಿ : ಡಿ.1:ದಾಸ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಸಂತ ಶ್ರೇಷ್ಠ ಕನಕದಾಸರ ಜೀವನ ಮತ್ತು ಸಾಧನೆ ವಿಶ್ವಕ್ಕೆ ಮಾದರಿಯಾಗಿದ್ದು, ಅವರು ಕನ್ನಡ ನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರಿಗೆ ಹೆಮ್ಮೆ. ಅವರ ಆಚಾರ, ವಿಚಾರ ಮತ್ತು ಅವರು ನೀಡಿದ ಸಂದೇಶಗಳನ್ನು ನಮ್ಮ ನಿಜ ಜೀವನದಲ್ಲಿ ಅನುಸರಿಸಿದಾಗ ಅವರ ಜಯಂತಿ ಆಚರಣೆ ಅರ್ಥ ಪೂರ್ಣವಾಗುತ್ತದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಬುಧವಾರ ತಾಲೂಕ ಹಾಲುಮತ ಕುರುಬರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸ ಶ್ರೇಷ್ಠ ಭಕ್ತ ಕನಕದಾಸರ 536ನೇ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾಸ ಸಾಹಿತ್ಯದಲ್ಲಿಯೇ ಅತ್ಯಂತ ಶ್ರೇಷ್ಠ ಸಾಹಿತ್ಯದ ಜ್ಞಾನವನ್ನು ಹೊಂದಿದ್ದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮತ್ತು ತಮ್ಮ ದಾಸ ಸಾಹಿತ್ಯದ ಮೂಲಕ ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಐದು ನೂರು ವರ್ಷಗಳ ಹಿಂದಿನಿಂದಲೂ ಇರುವ ಜಾತಿ ಪದ್ಧತಿ ವ್ಯವಸ್ಥೆಯ ವಿರುದ್ಧ ಮತ್ತು ಸಮಾಜದ ಮೌಡ್ಯಗಳ ವಿರುದ್ಧ ತಮ್ಮ ದಾಸ ಸಾಹಿತ್ಯದ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ. ಅವರ ಸಾಹಿತ್ಯವನ್ನು ಅರಿತು ನಾವೆಲ್ಲರೂ ಜೀವನದಲ್ಲಿ ಅನುಸರಿಸಿದಾಗ ನಮ್ಮ ಬದುಕು ಕೂಡ ಸುಂದರವಾಗುತ್ತದೆ. ಜಾತ್ಯಾತೀತವಾಗಿ ಬೆಳೆದ ಇಂತಹ ಮಹಾತ್ಮರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಇಂತಹ ಮಹಾತ್ಮರ ಮತ್ತು ಶ್ರೇಷ್ಠ ಸಂತರ ಜಯಂತಿ ಉತ್ಸವಗಳು ಎಲ್ಲ ಸಮುದಾಯದವರು ಕೂಡಿಕೊಂಡು ಆಚರಿಸುವಂತಾಗಬೇಕು ಎಂದು ಹೇಳಿದರು.

ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ ಹಾಲುಮತದ ಸಮಾಜದ ಬಾಂಧವರು ಸಾಮಾಜಿಕವಾಗಿ ಮತ್ತು ರಾಜಕೀಯ ಬಗ್ಗೆ ಬೆಳವಣಿಗೆ ಹೊಂದಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಬೇಕು. ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದರೆ ಅವರು ತಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಹಾಲುಮತ ಕುರುಬರ ಸಂಘದ ಅಧ್ಯಕ್ಷ ರಾವಸಾಬ ಬೇವನೂರ ಮಾತನಾಡಿ ದೇಶದೆಲ್ಲಡೆ ಸಂಚರಿಸಿ ಸಮಾಜದ ಅಂಕು ಮತ್ತು ಡೊಂಕುಗಳನ್ನು ತಿದ್ದಿ ಜನರಿಗೆ ಜಾತ್ಯತೀತ ಪ್ರಜ್ಞೆಯ ಬೆಳಕು ಹರಿಸಿದ ಕನಕದಾಸರ ಸಂದೇಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿವೆ ಎಂದು ಹೇಳಿದ ಅವರು ಅಥಣಿ ಪಟ್ಟಣದ ತಂಗಡಿ ಶಿನಾಳ್ ರಸ್ತೆಯಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷ ರೂ ಅನುದಾನದಲ್ಲಿ ಕನಕ ಭವನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರಾಜ್ಯ ಸರ್ಕಾರದಿಂದ ಬರಬೇಕಾದ ಅನುದಾನ ಇನ್ನು ಬಾರದೇ ಇರುವುದರಿಂದ ಕಾಮಗಾರಿ ಅರ್ಧದಲ್ಲಿ ನಿಂತಿದ್ದು, ಕಾಗವಾಡ ಶಾಸಕರು ಮತ್ತು ಅಥಣಿ ಶಾಸಕರು ಈ ಭವನದ ಕಾಮಗಾರಿಯನ್ನ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಸರ್ಕಾರದಿಂದ ಅನುದಾನ ಒದಗಿಸಬೇಕೆಂದು ಸಮುದಾಯದ ಜನತೆಯ ಪರವಾಗಿ ಶಾಸಕರಲ್ಲಿ ಮನವಿ ಮಾಡಿದರು.

ದಾಸಶ್ರೇಷ್ಠ ಕನಕದಾಸರ ಭಾವಚಿತ್ರ ಮೆರವಣಿಗೆ :

ಅಥಣಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಭಕ್ತ ಕನಕದಾಸರ ಭಾವಚಿತ್ರವನ್ನು ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಡೊಳ್ಳು ಕುಣಿತದ ಕಲಾತಂಡಗಳು ಭಾಗವಹಿಸಿದ್ದವು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಕನಕದಾಸರ ಭಾವಚಿತ್ರ ಮೆರವಣಿಗೆ ಅಂಬೇಡ್ಕರ್ ವೃತ್ತದ ಮೂಲಕ ಶ್ರೀ ದಡ್ಡಿ ಸಿದ್ದೇಶ್ವರ ದೇವಸ್ಥಾನದಲ್ಲಿ ಸಮಾರೋಪಗೊಂಡ ನಂತರ ವೇದಿಕೆ ಕಾರ್ಯಕ್ರಮ ಜರುಗಿತು.
ಸಮಾರಂಭದ ಸಾನಿಧ್ಯ ವಹಿಸಿದ್ದ ಜಂಬಗಿಯ ಸುರೇಶ ಮಹಾರಾಜರು ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಶಹಾಜಹಾನ ಡೊಂಗರಗಾವ, ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಸುರೇಶ್ ಮಾಯಣ್ಣವರ, ಬೀರಪ್ಪ ಯಕ್ಕಂಚಿ, ರಾವಸಾಬ ಐಹೊಳೆ, ಸುರೇಶ್ ಇಚೇರಿ, ನಿಂಗಪ್ಪ ಐನಾಪುರ, ಬಾಬು ಮೆಂಡಿಗೇರಿ, ಚಿದಾನಂದ ಮೂಕಣಿ, ಬೀರಪ್ಪ ಪೂಜಾರಿ, ಪರಶುರಾಮ ಕೋಳಿಕರ, ಕಲ್ಲಪ್ಪ ಮೇತ್ರಿ, ಜಕ್ಕಪ್ಪ ಬೇವನೂರ, ತುಕಾರಾಮ ದೇವಖಾತೆ, ಮಹಾಂತೇಶ ಲಂಗೋಟಿ, ಅಮೋಘ ಪೂಜಾರಿ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ತಾಲೂಕ ಪಂಚಾಯತ ಅಧಿಕಾರಿ ಶಿವಾನಂದ ಕಲ್ಲಾಪುರ, ಅಬಕಾರಿ ಅಧಿಕಾರಿ ಮಹಾಂತೇಶ ಬಂಡಗರ, ಅಭಿಯಂತರ ವೀರಣ್ಣ ವಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುರೇಶ ಇಚೇರಿ ಸ್ವಾಗತಿಸಿದರು, ಅಶೋಕ ಕೌಲಗುಡ್ಡ ಕಾರ್ಯಕ್ರಮ ನಿರೂಪಿಸಿದರು. ಬೀರಪ್ಪ ಯಕ್ಕಂಚಿ ವಂದಿಸಿದರು.


ಕನಕ ಭವನ ಕಾಮಗಾರಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ :

ಅಥಣಿ ಪಟ್ಟಣದಲ್ಲಿ ಹಾಲುಮತ ಕುರುಬರ ಸಮುದಾಯಕ್ಕೆ ಅಗತ್ಯವಿರುವ ಸಮುದಾಯ ಭವನದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬರುವ ಬೆಳಗಾವಿಯ ಅಧಿವೇಶನದಲ್ಲಿ ಸಮುದಾಯದ ಮುಖಂಡರೊಂದಿಗೆ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಶೀಘ್ರಗತಿಯಲ್ಲಿ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನ ಮಾಡುತ್ತೇನೆ. ಇದಲ್ಲದೆ ಅಥಣಿ ತಾಲೂಕಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಶಾಲೆ ಸ್ಥಾಪನೆಗೆ ತಾಂತ್ರಿಕ ಅಡಚಣೆಗಳಿವೆ. ನಂದಗಡದಲ್ಲಿ ಸ್ಥಾಪನೆಯಾಗಿರುವ ವಸತಿ ಶಾಲೆಯ ಮಾದರಿಯಲ್ಲಿ ಅಥಣಿಯಲ್ಲಿ ಕೇಂದ್ರೀಯ ಮಹಾವಿದ್ಯಾಲಯ ಶೀಘ್ರದಲ್ಲಿ ಸ್ಥಾಪನೆ ಮಾಡಲಾಗುವುದು. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಇದು ಬಹಳ ಅನುಕೂಲವಾಗಲಿದೆ.

          ಲಕ್ಷ್ಮಣ ಸವದಿ, ಶಾಸಕರು,