ಕನಕದಾಸರ ಕೀರ್ತನೆ ಪುನರ್ ವ್ಯಾಖ್ಯಾನ ಮಾಡುವ ಅಗತ್ಯವಿದೆಃ ಸುರೇಶ ಕೊಣ್ಣೂರ

ತಿಕೋಟ, ನ.23-ಹದಿನೈದನೇ ಶತಮಾನದಲ್ಲಿ ಭಕ್ತಶ್ರೇಷ್ಠ ಕನಕದಾಸರು ರಚಿಸಿದ ಕೃತಿಗಳ, ಕೀರ್ತನೆಗಳ ಪುನರ್ ವ್ಯಾಖ್ಯಾನ ಮಾಡುವುದು ಇಂದು ಅಗತ್ಯವಾಗಿದೆ ಎಂದು ಸುರೇಶ ಕೊಣ್ಣೂರ ಹೇಳಿದರು.
ಅವರು ಇಂದು ತಿಕೋಟ ಗ್ರಾಮದಲ್ಲಿ ಭಾರತ ಯುವ ವೇದಿಕೆ ಮತ್ತು ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಕನಕದಾಸ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಹದಿನೈದನೇ ಶತಮಾನದ ಸಂತ ಕನಕದಾಸರನ್ನು 21ನೇ ಶತಮಾನದಲ್ಲಿ ಅನುಸಂಧಾನ ಮಾಡಿಕೊಂಡು ಅವರನ್ನು ಸಮಕಾಲೀನಗೊಳಿಸಬೇಕಾಗಿದೆ. ಕನಕರ ಹೆಸರನ್ನು ಹೆಚ್ಚು ಪ್ರಚುರಪಡಿಸಬೇಕಾಗಿದೆ.ಸಮಾಜದ ಬೆಳವಣಿಗೆಗಳನ್ನು ಗಮನಿಸಿದರೆ ಅವರ ಚಿಂತನೆಗಳು ಅನಿವಾರ್ಯವಾಗಿವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಬ್ರಿಗೇಡ್ ಅಧ್ಯಕ್ಷ ಶಂಕರ ಹಳಲ್ಲಿ,ಕನಕದಾಸರು ಸಮಾಜದಲ್ಲಿನ ಅಸಮಾನತೆ,ಜಾತಿ ಜಾತಿಗಳ ನಡುವೆ ಇದ್ದ ಕಂದಕಗಳ ವಿರುದ್ಧ ಹೋರಾಡಿದರು. ಕನಕದಾಸ ವಾಲ್‍ಮೀಕಿ, ಬುದ್ಧ, ಬಸವಣ್ಣ ಸೇರಿದಂತೆ ಮುಂತಾದ ಮಹನೀಯರು ಯಾವುದೇ ಜಾತಿಗೆ ಕಟ್ಟುಬೀಳದೇ ತಮ್ಮ ಹೋರಾಟದ ಮೂಲಕ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸಿದರು ಎಂದರು.
ಈ ಸಂದರ್ಭದಲ್ಲಿ ಭಾರತ ಯುವ ವೇದಿಕೆಯ ಅಧ್ಯಕ್ಷರು ಭೀರು ಗಾಢವೆ, ವಿಠ್ಠಲ ಯಕುಂಡಿ, ವಿಠ್ಠಲ ಸಿಂದೆ, ಹಣಮಂತ ಶೆಟ್ಟಣ್ಣವರ, ಅಶೋಕ ಅಳೋಳ್ಳಿ, ಸಿದ್ದು ಕುಮಟಗಿ,ಗೌತಮ ಸಿಂಗೆ, ಲಕ್ಷ್ಮಣ ದೊಡ್ಡಮನಿ, ಸಂತೋಷ ಶೆಟ್ಟಣ್ಣವರ, ಮಾಳು ಕಲಮಡಿ ಮುಂತಾದವರು ಇದ್ದರು.