ಕನಕದಾಸರು ಸರ್ವಕಾಲಿಕ ದಾಸಶ್ರೇಷ್ಠರು: ಬಳ್ಳಾರಿ

ಬ್ಯಾಡಗಿ, ನ23: ಬದುಕಿನ ಅಂಕುಡೊಂಕುಗಳನ್ನು ದಾಸ ಸಾಹಿತ್ಯದ ಮೂಲಕ ಮಾರ್ಮಿಕವಾಗಿ ತಿದ್ದಿದ ಮಹಾನ್ ದಾರ್ಶನಿಕರಾದ ಕನಕದಾಸರು ಸಾರ್ವಕಾಲಿಕ ದಾಸಶ್ರೇಷ್ಠರಾಗಿದ್ದಾರೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ದಾಸಶ್ರೇಷ್ಠ ಕನಕದಾಸರ 534ನೇ ಜಯಂತಿಯ ಅಂಗವಾಗಿ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಹಾಗೂ ವಿಶ್ವಧಾರಾ ಬ್ಲಡ್ ಬ್ಯಾಂಕ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಭಗವಂತನನ್ನು ಕಾಣುವ ಅವಕಾಶ ಇರಬೇಕೆಂಬುದು ಕನಕದಾಸರ ಮುಖ್ಯವಾಗಿ ಆಶಯವನ್ನು ಹೊಂದಿದ್ದರು. ಅವರ ಆದರ್ಶ ತತ್ವಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಸಮಾಜದ ತಾರತಮ್ಯ ವ್ಯವಸ್ಥೆ ಹಾಗೂ ಅದರ ನಿವಾರಣೆಯ ಮೇಲೆ ರಚಿತವಾದ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ಭಾಷಾ ಬೆಳವಣಿಗೆಗೆ ದೊಡ್ಡ ಕೊಡುಗೆಯನ್ನು ಕನಕದಾಸರು ನೀಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿಶ್ವಧಾರಾ ಬ್ಲಡ್ ಬ್ಯಾಂಕ್ ವ್ಯವಸ್ಥಾಪಕ ಡಾ|| ವಿ.ಎಂ.ಹಿರೇಮಠ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಪುರಸಭೆ ಅಧ್ಯಕ್ಷೆ ಸರೋಜ ಉಳ್ಳಾಗಡ್ಡಿ, ಸದಸ್ಯರಾದ ಬಸವಣ್ಣೆಪ್ಪ ಛತ್ರದ, ಶಿವರಾಜ ಅಂಗಡಿ, ಫಕ್ಕೀರಮ್ಮ ಚಲುವಾದಿ, ಎಸ್.ಎನ್.ಮಾತನವರ, ಚಿಕ್ಕಣ್ಣ ಹಾದಿಮನಿ, ಮಲ್ಲೇಶ ಬಣಕಾರ, ರಾಮಣ್ಣ ಉಕ್ಕುಂದ, ಬೀರಪ್ಪ ಬಣಕಾರ, ಡಾ.ಎಸ್.ಎನ್.ನಿಡಗುಂದಿ, ಸುರೇಶ ಆಸಾದಿ, ಮಹೇಶ ಉಜನಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.