ಕನಕದಾಸರನ್ನು ಒಂದೇ ಜಾತಿಗೆ ಸೀಮಿತ ಮಾಡಬೇಡಿ

ಅಫಜಲಪುರ:ನ.23: ಸಂತಶ್ರೇಷ್ಠ, ಕವಿ ಕನಕದಾಸರು ಅನೇಕ ಅರ್ಥಪೂರ್ಣ ಕೀರ್ತನೆಗಳನ್ನು ಸರಳ ಕನ್ನಡದಲ್ಲಿ ರಚಿಸಿ ಕೊಡುಗೆಯಾಗಿ ನೀಡಿದ್ದಾರೆ. ಅವರ ವಿಚಾರಧಾರೆಗಳು,ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ತೋರಿದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಮುಖಂಡ ಭೀರಣ್ಣಾ ಕಲ್ಲೂರ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ 534ನೇ ಜಯಂತಿಯಲ್ಲಿ ಮಾತನಾಡಿದ ಅವರು ತಾರತಮ್ಯ, ಜಾತೀಯತೆ ಎಲ್ಲೆಡೆ ಆಳವಾಗಿ ಬೇರೂರಿದ್ದ ಕಾಲಘಟ್ಟದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕನಕದಾಸರದ್ದು ಆದರ್ಶ ವ್ಯಕ್ತಿತ್ವವಾಗಿದೆ. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಜನರನ್ನು ಬಡಿದೆಚ್ಚರಿಸಿದ ಕನಕದಾಸರು ಹಾಗೂ ಕನಕದಾಸರ ವ್ಯಕ್ತಿತ್ವ ಅಗಾಧ ಪ್ರತಿಭೆಯಿಂದ ಕೂಡಿತ್ತು.ಕವಿಯಾಗಿ, ಬಂಡಾಯಗಾರರಾಗಿ, ಆಧ್ಯಾತ್ಮಿಕ ವೈಚಾರಿಕತೆಯುಳ್ಳ ಬಹುಸಂಪನ್ನ ದೃಷ್ಟಿಯಿಂದ ಕನಕದಾಸರನ್ನು ನಾವು ನೋಡಬಹುದು.ಆದರೆ ಇತ್ತೀಚಿನ ದಿನಗಳಲ್ಲಿ ಕನಕದಾಸರನ್ನು ಒಂದೇ ಜಾತಿಗೆ ಸೀಮಿತ ಮಾಡುವ ಕುತಂತ್ರ ನಡೆದಿದೆ ಇದು ಸರಿಯಲ್ಲ ಎಂದು ತಿಳಿಸಿದರು.

ಕುರುಬ ಸಮಾಜದ ಮುಖಂಡ ಕೆ.ಜಿ.ಪೂಜಾರಿ ಮಾತನಾಡಿ ಇಂದಿನ ದಿನಗಳಲ್ಲಿ ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ ಹೆಚ್ಚಾಗುತ್ತಿದೆ. ಅದನ್ನು ತಡೆಯಲು ಕನಕದಾಸರ ತತ್ವಾದರ್ಶಗಳು ಅಗತ್ಯವಾಗಿವೆ. ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಕನಕದಾಸರ ಜಯಂತಿಯನ್ನು ಪ್ರತಿ ವರ್ಷ ಸರ್ಕಾರ ಆಚರಿಸುವ ಮೂಲಕ ಅವರ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಲ್ಲಿ ಮನೆಮಾಡಿದ್ದ ಮೌಡ್ಯತೆ. ಕಂದಾಚಾರ, ಅಂಕುಡೊಂಕುಗಳನ್ನು ತಿದ್ದಿದ ಬಸವಣ್ಣನವರು, ಶರಣರ ಪರಂಪರೆಯನ್ನು ಕನಕದಾಸರು ಮುಂದುವರಿಸಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಅಧ್ಯಕ್ಷ ವಿಠ್ಠಲ್ ಜಗಲಗೊಂಡ,ಭೀರಣ್ಣಾ ಕನಕ ಟೇಲರ್,ಸೈದಪ್ಪ ಹಿರೇಕುರುಬರ, ರಮೇಶ ಪುಜಾರಿ,ಬಿ.ಎಮ್.ರಾವ್,ರಾಜು ಆರೇಕರ,ಕರೇಪ್ಟ ಪುಜಾರಿ, ಮಹಾಂತೇಶ್ ಬಡದಾಳ, ರವಿ ಗೌರ, ಪದ್ಮರಾಜ್ ಪೂಜಾರಿ, ಅರ್ಜುನ ಕೆರೂರ, ಯಲ್ಲಾಲಿಂಗ ಪುಜಾರಿ,ಗುರು ಆನೂರ,ಉಪ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಇದ್ದರು.