ಕದ್ದ ಕೊರೊನಾ ವ್ಯಾಕ್ಸಿನ್ ಬಾಕ್ಸ್ ಠಾಣೆ ಬಳಿ ಬಿಟ್ಟು ಹೋದ ಕಳ್ಳರು

ಹರಿಯಾಣ,ಏ.೨೩- ಕಳ್ಳತನ ಮಾಡಿದ್ದ ಬಾಕ್ಸ್‌ನಲ್ಲಿ ಕೊರೊನಾ ವ್ಯಾಕ್ಸಿನ್ ಇದ್ದಿದ್ದನ್ನು ಕಂಡ ಕಳ್ಳರು ಬಾಕ್ಸನ್ನು ಪೊಲೀಸ್ ಠಾಣೆಯ ಬಳಿ ಬಿಟ್ಟು ಹೋಗಿರುವ ಘಟನೆ ಜಿಂದ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಕಳವು ಮಾಡಿದ ಬಾಕ್ಸ್ ಜೊತೆಗೆ ಪತ್ರವನ್ನೂ ಬರೆದಿರುವ ಕಳ್ಳರು ನಮ್ಮನ್ನು ಕ್ಷಮಿಸಿ. ಬಾಕ್ಸ್‌ನಲ್ಲಿ ವ್ಯಾಕ್ಸಿನ್ ಇದೆ ಎಂದು ತಿಳಿಯದೇ ಕದ್ದಿದ್ದಕ್ಕೆ ಕ್ಷಮೆ ಇರಲಿ ಎಂದು ಬರೆದು ಮಾನವೀಯತೆ ಮೆರೆದಿರುವ ಕಳ್ಳರು ಪೊಲೀಸರ ಮನಗೆದ್ದಿದ್ದಾರೆ.
ಜಿಂದ್ ಜಿಲ್ಲೆಯ ಆಸ್ಪತ್ರೆಗೆ ನಿನ್ನೆ ರಾತ್ರಿ sನುಗ್ಗಿದ್ದ ಕಳ್ಳರು ಸ್ಟೋರ್ ರೂಂನಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಆಸ್ಪತ್ರೆಯ ಹೆಡ್ ನರ್ಸ್ ಬಂದು ನೋಡುವಷ್ಟರಲ್ಲಿ ಔಷಧಿ ದಾಸ್ತಾನು ಕೊಠಡಿಯ ಬೀಗ ಮುರಿದಿತ್ತು.
ಒಳಗೆ ಪರಿಶೀಲಿಸಿದಾಗ ವ್ಯಾಕ್ಸಿನ್ ಇದ್ದ ಬಾಕ್ಸ್ ಕಣ್ಮರೆಯಾಗಿತ್ತು. ವ್ಯಾಕ್ಸಿನ್ ಕಳವಿನಿಂದ ಜಿಲ್ಲೆಯಲ್ಲಿ ವಿತರಿಸಲು ಲಸಿಕೆ ಇಲ್ಲದಂತೆ ಆಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ವಾಕ್ಸಿನ್ ಕಳವಾಗಿದೆ ಎಂದು ದೊಡ್ಡ ಸುದ್ದಿಯಾಗಿತ್ತು.
೨ ದಿನಗಳ ನಂತರ ಆಸ್ಪತ್ರೆಯಲ್ಲಿ ಕಳುವಾಗಿದ್ದ ಲಸಿಕೆಗಳಿದ್ದ ಬಾಕ್ಸ್ ಸ್ಥಳೀಯ ಪೊಲೀಸ್ ಠಾಣೆಯ ಬಳಿ ಪತ್ತೆಯಾಗಿತ್ತು. ಬಾಕ್ಸ್‌ನಲ್ಲಿ ೧೮೨ ವೈಯಲ್ಸ್ ಕೋವಿಶೀಲ್ಡ್ ಹಾಗೂ ೪೪೦ ಡೋಸೇಜ್ ಕೊವ್ಯಾಕ್ಸಿನ್ ಲಸಿಕೆ ಹಾಗೆಯೇ ಇದ್ದವು, ಬಾಕ್ಸ್ ಜೊತೆ ಕಳ್ಳರು ಬರೆದಿದ್ದ ಪತ್ರವೂ ಸಿಕ್ಕಿತ್ತು. ಗೊತ್ತಿಲ್ಲದೇ ನಾವು ವ್ಯಾಕ್ಸಿನ್ ಇದ್ದ ಬಾಕ್ಸನ್ನು ಕದ್ದಿದ್ದೇವೆ.
ಹೀಗಾಗಿ ಬಾಕ್ಸನ್ನು ಹಿಂತಿರುಗಿಸುತ್ತಿದ್ದೇವೆ. ಕ್ಷಮೆ ಇರಲಿ ಎಂದು ಹಿಂದಿಯಲ್ಲಿ ಬರೆಯಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೀಘ್ರವೇ ಕಳ್ಳರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.