ಕದನ ವಿರಾಮ ವಿಸ್ತರಣೆಗೆ ಚಿಂತನೆ

ಹೆಝ್ಬುಲ್ಲಾಗೆ ಕದನ ವಿರಾಮ ಮುಂದುವರೆಯುವ ವಿಶ್ವಾಸ
ಇಸ್ರೇಲ್ ಹಾಗೂ ಹಮಾಸ್ ನಡುವಿನ ವಿರಾಮದಲ್ಲಿ ಮಂಗಳವಾರ ಕೊನೆಯ ದಿನವಾಗಿದ್ದು, ರಾತ್ರಿ ವೇಳೆ ಅವಧಿ ಮುಕ್ತಾಯಗೊಳ್ಳಲಿದೆ. ಈ ನಡುವೆ ಇರಾನ್ ಬೆಂಬಲಿತ ಹೆಝ್ಬುಲ್ಲಾ ನಾಯಕರು ಕದನ ವಿರಾಮ ಮತ್ತೆ ಮುಂದುವರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೆಬನಾನ್ ಪ್ರಧಾನಿ ನಾಜಿಬ್ ಮಿಕಾಟಿ ಅವರನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಹಿರಿಯ ಹಿಜ್ಬುಲ್ಲಾ ನಾಯಕ ಲೋಮ್ಕರ್ ಹಸನ್ ಫದ್ಲಲ್ಲಾ, ದೇವರ ಇಚ್ಛೆಯಂತೆ ಕದನ ವಿರಾಮ ಮುಂದುವರೆಯಲಿದೆ. ಯುದ್ದದಲ್ಲಿ ನಷ್ಟಗೊಂಡವರಿಗೆ ಪರಿಹಾರ ನೀಡಲು ಮಿಕಾಟಿ ಅವರು ಒಪ್ಪಿಕೊಂಡಿದ್ದಾರೆ. ಇದು ನಾವು ನೀಡುವ ಪರಿಹಾರದಿಂದ ಪ್ರತ್ಯೇಕವಾಗಿರಲಿದೆ. ಪರಿಹಾರ ಕಾರ್ಯಗಳ ವಿಚಾರಗಳಲ್ಲಿ ಮಿಕಾಟಿ ಅವರು ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಗಾಜಾ, ನ.೨೯- ಈಗಾಗಲೇ ಮತ್ತೆರಡು ದಿನಗಳಿಗೆ ವಿಸ್ತರಣೆಯಾಗಿರುವ ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮ ಮುಂದುವರೆದಿದೆ. ಇದೀಗ ಎರಡನೇ ಹಾಗೂ ಅಂತಿಮ ಕದನ ವಿರಾಮ ದಿನವಾದ ಮಂಗಳವಾರ ಇಸ್ರೇಲ್‌ನ ೧೨ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದ್ದು, ಅಲ್ಲದೆ ಅತ್ತ ಪ್ಯಾಲೆಸ್ತೀನ್‌ನ ೩೦ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಕದನ ವಿರಾಮದಲ್ಲಿ ಇಂದು ಅಂತಿಮ ದಿನವಾಗಿದ್ದು, ಇಂದು ತಡರಾತ್ರಿ ಇದಕ್ಕೆ ಸಂಬಂಧಿಸಿದ ಘೋಷಣೆ ಮತ್ತೆ ಹೊರಬೀಳುವ ಸಾಧ್ಯತೆ ಇದೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಹಮಾಸ್ ಉಗ್ರರು ಇಸ್ರೇಲ್ ಒತ್ತೆಯಾಳುಗಳನ್ನು ಈಜಿಪ್ಟ್ ಗಡಿಪ್ರದೇಶದ ರಫ್ತಾ ದಾಟುವಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿರುವ ಫೊಟೋ ಹಾಗೂ ವಿಡಿಯೋಗಳು ಇದೀಗ ಹರಿದಾಡುತ್ತಿದೆ. ಇನ್ನು ಬಿಡುಗಡೆಗೊಂಡ ೧೨ ನಾಗರಿಕರ ಪೈಕಿ ೧೦ ಇಸ್ರೇಲ್ ದೇಶಕ್ಕೆ ಸೇರಿದವರಾಗಿದ್ದರೆ ಇಬ್ಬರು ಥಾಯ್ಲೆಂಡ್ ಮೂಲದವರು. ಇನ್ನು ಮಂಗಳವಾರ ಪ್ಯಾಲೆಸ್ತೀನ್‌ನ ೩೦ ಕೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಶುಕ್ರವಾರದಿಂದ ಆರಂಭಗೊಂಡ ಕದನ ವಿರಾಮದಲ್ಲಿ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ ೧೫೦ಕ್ಕೇರಿದೆ. ಅಲ್ಲದೆ ಒಟ್ಟು ೮೦ ಒತ್ತೆಯಾಳುಗಳನ್ನು ಈಗಾಗಲೇ ಹಮಾಸ್ ಬಿಡುಗಡೆಗೊಳಿಸಿದೆ. ಇನ್ನು ಈ ನಡುವೆ ಇಸ್ರೇಲ್ ಜೈಲಿನಲ್ಲಿದ್ದ ೧೪ರ ಹರೆಯದ ಬಾಲಕನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಆದರೆ ಈ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಶುಕ್ರವಾರ ಆರಂಭವಾಗಿದ್ದ ನಾಲ್ಕು ದಿನಗಳ ಕದನ ವಿರಾಮವು ಸೋಮವಾರದಂದು ಮತ್ತೆರಡು ದಿನಗಳಿಗೆ ವಿಸ್ತರಣೆಯಾಗಿತ್ತು. ಇದೀಗ ಇಂದು ಕದನ ವಿರಾಮದ ಕೊನೆಯ ದಿನವಾಗಿದ್ದು, ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಕೂಡ ಇದೆ. ಇನ್ನೂ ಹೆಚ್ಚಿನ ಸಂಖ್ಯೆಯ ಒತ್ತೆಯಾಳುಗಳು ಹಮಾಸ್ ಬಳಿ ಇರುವ ಹಿನ್ನೆಲೆಯಲ್ಲಿ ಮತ್ತೆ ಕೆಲವು ದಿನಗಳ ಕಾಲ ಇಸ್ರೇಲ್-ಹಮಾಸ್ ನಡುವೆ ಶಾಂತಿ ಪ್ರಕ್ರಿಯೆ ಮುಂದುವರೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಇಸ್ರೇಲ್-ಹಮಾಸ್ ನಡುವೆ ಮಧ್ಯಸ್ಥಿಕೆ ವಹಿಸಿರುವ ಕತಾರ್, ಇಂದು ರಾತ್ರಿ ಕೂಡ ಇದೇ ಕಾರ್ಯವನ್ನು ಮುಂದುವರೆಸುವ ಸಾಧ್ಯತೆ ಇದೆ.