ಕದನ ವಿರಾಮ ಇಸ್ರೇಲ್ ತಿರಸ್ಕಾರ

ಜೆರುಸಲೆಂ (ಇಸ್ರೇಲ್), ಫೆ.೮- ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನ ಮತ್ತಷ್ಟು ಮುಂದುವರೆಯುವ ಎಲ್ಲಾ ಸಾಧ್ಯತೆಗಳಿವೆ ಹೆಚ್ಚಿವೆ. ಹಮಾಸ್‌ನ ಪ್ರಸ್ತಾವಿತ ಕದನ ವಿರಾಮ ನಿಯಮಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಿರಸ್ಕರಿಸಿದ್ದು, ತಿಂಗಳೊಳಗೆ ಗಾಜಾದಲ್ಲಿ ಸಂಪೂರ್ಣ ಗೆಲುವು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಕದನ ವಿರಾಮಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕೆಲವೊಂದು ಪ್ರಸ್ತಾಪಗಳನ್ನು ಮುಂದಿಟ್ಟಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಹಮಾಸ್ ತನ್ನ ಹಲವು ಬೇಡಿಕೆಗಳ ಸರಣಿಗಳನ್ನೇ ಬಿಡುಗಡೆ ಮಾಡಿತ್ತು. ಸದ್ಯ ಈ ಬೇಡಿಕೆಗಳ ಸರಣಿಗಳನ್ನೇ ಪ್ರಧಾನಿ ಬೆಂಜಮಿನ್ ಅವರು ತಿರಸ್ಕರಿಸಿದ್ದಾರೆ. ?ಹಮಾಸ್ ಪಡೆ ವಿಲಕ್ಷಣ ರೀತಿಯ ಬೇಡಿಕೆಗಳನ್ನು ಮುಂದಿರಿಸಿದೆ. ಮಾತುಕತೆಗಳು ಸದ್ಯ ಮುಂದುವರೆಯುತ್ತಿದ್ದು, ಒಂದು ಹಂತಕ್ಕೆ ಬರುವಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ಸಂಪೂರ್ಣ ಮತ್ತು ಅಂತಿಮ ವಿಜಯವನ್ನು ಹೊರತುಪಡಿಸಿ ಬೇರೆ ಯಾವುದೇ ಪರಿಹಾರವಿಲ್ಲ. ಒಂದು ವೇಳೆ ಗಾಝಾದಲ್ಲಿ ಹಮಾಸ್ ಪಡೆ ಮುಂದುವರೆದರೆ ಆಗ ಮುಂದಿನ ನರಮೇದ ಮತ್ತೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಸಮಯದ ಪ್ರಶ್ನೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ನೆತನ್ಯಾಹು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಹಮಾಸ್‌ನ ಹಿರಿಯ ಅಧಿಕಾರಿ ಸಮಿ ಅಬು ಜುಹ್ರಿ, ನೆತನ್ಯಾಹು ಅವರ ಹೇಳಿಕೆಗಳು ರಾಜಕೀಯ ಧೈರ್ಯದ ಒಂದು ರೂಪವಾಗಿದೆ. ಅವರು ಈ ಪ್ರದೇಶದಲ್ಲಿ ಸಂಘರ್ಷವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಈ ನಡುವೆ ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಹೊಸ ಸುತ್ತಿನ ಮಾತುಕತೆಗಳು ಗುರುವಾರ ಕೈರೋದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಈಜಿಪ್ಟ್ ಅಧಿಕೃತ ಮೂಲವು ಆಂಗ್ಲ ಸುದ್ದಿಮಾಧ್ಯಮೊಂದಕ್ಕೆ ತಿಳಿಸಿದೆ. ಅಲ್ಲದೆ ಶಾಂತ ಒಪ್ಪಂದವನ್ನು ತಲುಪಲು ಅಗತ್ಯವಾದ ನಮ್ಯತೆಯನ್ನು ತೋರಿಸಲು ಈಜಿಪ್ಟ್ ಎಲ್ಲಾ ಪಕ್ಷಗಳಿಗೆ ಕರೆ ನೀಡಿದೆ ಎಂದು ಮೂಲಗಳು ತಿಳಿಸಿವೆ.