ಕದನ ವಿರಾಮದ ನಿರ್ಣಯಕ್ಕೆ ಅಮೆರಿಕಾ ವಿಟೋ

ನ್ಯೂಯಾರ್ಕ್, ಡಿ.೯- ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ನಡೆಸುವಂತೆ ವಿಶ್ವಸಂಸ್ಥೆಯ ಬಹುಮುಖ್ಯ ನಿರ್ಣಯವನ್ನು ಅಮೆರಿಕಾವು ಅಚ್ಚರಿಯ ರೀತಿಯಲ್ಲಿ ವಿಟೋ ಅಧಿಕಾರ ಬಳಸಿ ತಡೆಹಿಡಿದಿದೆ. ಈ ನಡುವೆ ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಶುಕ್ರವಾರ ಮಂಡಿಸಿದ ತಕ್ಷಣದ ಕದನ ವಿರಾಮದ ಸಂಕ್ಷಿಪ್ತ ಕರಡು ನಿರ್ಣಯದ ಪರವಾಗಿ ಭದ್ರತಾ ಮಂಡಳಿಯ ೧೫ ಸದಸ್ಯರ ಪೈಕಿ ಹದಿಮೂರು ಸದಸ್ಯರು ಪರವಾಗಿ ಮತ ಹಾಕಿದರು. ಆದರೆ ಯುನೈಟೆಡ್ ಕಿಂಗ್‌ಡಮ್ ಮತದಾನದಿಂದ ದೂರು ಉಳಿದಿತ್ತು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ತುರ್ತು ಭದ್ರತಾ ಮಂಡಳಿಯ ಸಭೆಯನ್ನು ಕರೆಯುವ ಸಲುವಾಗಿ ಯುಎನ್ ಚಾರ್ಟರ್‌ನಲ್ಲಿ ತೀರಾ ಅಪರೂಪವಾಗಿ ಬಳಸಲಾಗುವ ಆರ್ಟಿಕಲ್ ೯೯ ಅನ್ನು ಬಳಸಿ, ತಕ್ಷಣವೇ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಆಯೋಜಿಸಿತ್ತು. ಅಲ್ಲದೆ ತಕ್ಷಣವೇ ಕದನ ವಿರಾಮಕ್ಕೆ ಕರೆ ನೀಡುವ ಕರಡು ನಿರ್ಣಯ ಮಂಡಿಸಿತ್ತು. ಆದರೆ ಈಗಾಗಲೇ ಇಸ್ರೇಲ್‌ಗೆ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಮಿಲಿಟರಿ ಸಹಾಯವನ್ನು ಪೂರೈಸಿರುವ ಅಮೆರಿಕಾವು ವಿಶ್ವಸಂಸ್ಥೆಯ ನಿರ್ಣಯವನ್ನು ವೀಟೋ ಅಧಿಕಾರ ಚಲಾಯಿಸಿ ತಡೆಹಿಡಿದಿದೆ. ಇನ್ನು ವಿಟೋ ಅಧಿಕಾರ ಬಳಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯಲ್ಲಿರುವ ಅಮೆರಿಕಾ ಉಪ ರಾಯಭಾರಿ ರಾಬರ್ಟ್ ವುಡ್, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡೂ ಶಾಂತಿ ಮತ್ತು ಭದ್ರತೆಯಲ್ಲಿ ಬದುಕಬಹುದಾದ ಬಾಳಿಕೆ ಬರುವ ಶಾಂತಿ ಒಪ್ಪಂದವನ್ನು ಅಮೆರಿಕಾ ಬಲವಾಗಿ ಬೆಂಬಲಿಸುತ್ತದೆ. ನಾವು ತಕ್ಷಣದ ಕದನ ವಿರಾಮದ ಕರೆಗಳನ್ನು ಬೆಂಬಲಿಸುವುದಿಲ್ಲ. ಇದು ಮುಂದಿನ ಯುದ್ಧಕ್ಕೆ ಬೀಜಗಳನ್ನು ಮಾತ್ರ ನೆಡುತ್ತದೆ, ಏಕೆಂದರೆ ಹಮಾಸ್‌ಗೆ ಬಾಳಿಕೆ ಬರುವ ಶಾಂತಿಯನ್ನು ನೋಡುವ ಹಾಗೂ ಎರಡು-ರಾಜ್ಯ ಪರಿಹಾರವನ್ನು ನೋಡುವ ಬಯಕೆಯಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಕ್ರೌರ್ಯವನ್ನು ಭದ್ರತಾ ಮಂಡಳಿ ಸದಸ್ಯರು ಖಂಡಿಸದ ಬಗ್ಗೆ ರಾಬರ್ಟ್ ವುಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹಮಾಸ್ ಬೆಂಬಲ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಮೆರಿಕಾ ಹಾಗೂ ಇಸ್ರೇಲ್ ಕದನ ವಿರಾಮವನ್ನು ವಿರೋಧಿಸುತ್ತಲೇ ಬಂದಿದೆ. ಆದರೆ ಇದರ ಬದಲಿಗೆ ನಾಗರಿಕರನ್ನು ರಕ್ಷಿಸುವ ಹೋರಾಟದಲ್ಲಿ ವಿರಾಮಗಳನ್ನು ಎರಡೂ ರಾಷ್ಟ್ರಗಳು ಬೆಂಬಲಿಸುತ್ತದೆ. ತಾತ್ಕಾಲಿಕ ಕದನ ವಿರಾಮದ ಬಳಿಕ ಗಾಜಾ ಮೇಲೆ ಇಸ್ರೇಲ್ ಬಾಂಬ್ ದಾಳಿ ತೀವ್ರಗೊಳಿಸಿದೆ. ಈ ಕದನದಲ್ಲಿ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಕನಿಷ್ಠ ೧೭,೪೮೭ ಮಂದಿ ಮೃತಪಟ್ಟಿದ್ದು, ಇವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಅಧಿಕ ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ.

ಗಾಝಾ ಪ್ರದೇಶದ ಬಹುತೇಕ ಭಾಗ ಬರಡುಭೂಮಿಯಾಗಿ ಮಾರ್ಪಟ್ಟಿದ್ದು, ಶೇಕಡ ೮೦ರಷ್ಟು ಮಂದಿ ಸ್ಥಳಾಂತರಗೊಂಡಿದ್ದಾರೆ. ಇವರು ಆಹಾರ, ಇಂಧನ, ನೀರು, ವೈದ್ಯಕೀಯ ನೆರವು ಮತ್ತಿತರ ಅಗತ್ಯ ಸೌಕರ್ಯಗಳ ಬರ ಎದುರಿಸುತ್ತಿದ್ದು, ರೋಗಭೀತಿ ವ್ಯಾಪಕವಾಗಿದೆ.
-ವಿಶ್ವಸಂಸ್ಥೆ