ಕದನಕ್ಕೆ ಮತ್ತೆರಡು ದಿನ ಬ್ರೇಕ್

ಗಾಜಾ, ನ.೨೮- ಇಸ್ರೇಲ್ ಹಾಗೂ ಹಮಾಸ್ ನಡುವೆ ಏರ್ಪಟ್ಟಿದ್ದ ನಾಲ್ಕು ದಿನಗಳ ಕದನ ವಿರಾಮವನ್ನು ಸದ್ಯ ಮತ್ತೆರಡು ದಿನಗಳಿಗೆ ವಿಸ್ತರಿಸಲಾಗಿದೆ. ಮಾತುಕತೆಯಲ್ಲಿ ಮಧ್ಯವರ್ತಿ ಪಾತ್ರ ವಹಿಸಿದ್ದ ಕತಾರ್ ಈ ಬಗ್ಗೆ ಅಧಿಕೃತವಾಗಿ ತಿಳಿಸಿದೆ. ಈ ನಡುವೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ೧೧ ಇಸ್ರೇಲ್ ಒತ್ತೆಯಾಳುಗಳು ಹಮಾಸ್ ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಪ್ಯಾಲೆಸ್ತೀನ್‌ನ ೩೩ ನಾಗರಿಕರನ್ನು ಇಸ್ರೇಲ್ ಬಿಡುಗಡೆ ಮಾಡಿದೆ.
ಕದನ ವಿರಾಮದ ಮುಕ್ತಾಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ ಕತಾರ್, ಮತ್ತೆರಡು ದಿನಗಳ ಕಾಲ ಯುದ್ದ ವಿರಾಮಕ್ಕೆ ಇಸ್ರೇಲ್-ಹಮಾಸ್ ಒಪ್ಪಿಕೊಂಡಿದೆ ಎಂದು ಘೋಷಿಸಿದೆ. ಇನ್ನು ಮುಂದಿನ ಎರಡು ದಿನಗಳ ಕದನ ವಿರಾಮದಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ೨೦ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದೆ ಎಂದು ಅಮೆರಿಕಾದ ರಾಷ್ಟ್ರೀಯ ಭದ್ರತಾ ದಳದ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ. ಮಂಗಳವಾರ ಹಾಗೂ ಬುಧವಾರ ಕದನ ವಿರಾಮ ಘೋಷಣೆಯಾಗಿದ್ದು, ಮುಂದೆ ಮತ್ತಷ್ಟು ಒತ್ತೆಯಾಳುಗಳು ಹಮಾಸ್ ಉಗ್ರರ ಬಳಿ ಇರುವ ಹಿನ್ನೆಲೆಯಲ್ಲಿ ಕದನ ವಿರಾಮ ಮತ್ತೆ ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ತನ್ನ ಜೈಲಿನಲ್ಲಿರುವ ಭಾರೀ ಸಂಖ್ಯೆಯ ಪ್ಯಾಲೆಸ್ತೀನ್ ನಾಗರಿಕರನ್ನು ಬಿಡುಗಡೆ ಮಾಡುತ್ತಿದೆ. ಇನ್ನು ಶುಕ್ರವಾರ ಆರಂಭವಾಗಿದ್ದ ನಾಲ್ಕು ದಿನಗಳ ಕದನ ವಿರಾಮ ಸೋಮವಾರಕ್ಕೆ ಅಂತ್ಯಗೊಂಡಿದ್ದು, ಈ ಅವಧಿಯಲ್ಲಿ ಇಸ್ರೇಲ್‌ನ ೬೯ ಒತ್ತೆಯಾಳುಗಳನ್ನು ಹಮಾಸ್ ಪಡೆ ಬಿಡುಗಡೆಗೊಳಿಸಿತ್ತು. ಆದರೆ ಸೋಮವಾರ ಕದನ ವಿರಾಮ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಸಮರ ಮುಂದುವರೆಯುವ ಬಗ್ಗೆ ಆತಂಕ ಎದುರಾಗಿತ್ತು. ಅಲ್ಲದೆ ಈಗಾಗಲೇ ಇಸ್ರೇಲ್‌ನ ಭೀಕರ ದಾಳಿಯಿಂದ ಅಸ್ತವ್ಯಸ್ತಗೊಂಡಿರುವ ಗಾಝಾದಲ್ಲಿ ಪರಿಹಾರ ಕಾರ್ಯಕ್ಕೆ ಮತ್ತೆ ತೊಂದರೆಯಾಗುವ ಸಾಧ್ಯತೆ ಇತ್ತು. ಹೀಗಾಗಿ ಕದನ ವಿರಾಮವನ್ನು ವಿಸ್ತರಿಸುವಂತೆ ವಿಶ್ವಸಂಸ್ಥೆ, ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಆಗ್ರಹ ಮಾಡಿತ್ತು. ಇದೀಗ ಕತಾರ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮವನ್ನು ಮತ್ತೆರಡು ದಿನಗಳ ಕಾಲ ಇಸ್ರೇಲ್-ಹಮಾಸ್ ವಿಸ್ತರಿಸಲು ನಿರ್ಧರಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಮಾಸ್ ಉಗ್ರರ ಬಳಿಯಿರುವ ಇನ್ನಷ್ಟು ಒತ್ತೆಯಾಳುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕದನ ವಿರಾಮದ ಹಿನ್ನೆಲೆಯಲ್ಲಿ ಉತ್ತರ ಗಾಜಾಗೆ ಭಾರೀ ಪ್ರಮಾಣದ ಪರಿಹಾರ ಸಾಮಾಗ್ರಿಗಳು ಬಂದಿದ್ದು, ಸಹಜವಾಗಿಯೇ ನಿರಾಶ್ರಿತರಲ್ಲಿ ಕೊಂಚ ಸಮಾಧಾನ ಮೂಡಿಸಿದೆ. ಇನ್ನು ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ನಡೆದ ಹಮಾಸ್ ದಾಳಿಯಲ್ಲಿ ೧,೨೦೦ ಜನರು ಸಾವನ್ನಪ್ಪಿದ್ದು, ಸುಮಾರು ೨೪೦ ಮಂದಿಯನ್ನು ಒತ್ತೆಯಾಳುಗಳಾಗಿ ಅಪಹರಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ೧೪,೫೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ಹೇಳಿದೆ