ಕದಂಬರ ಕೊಡುಗೆ ನಾಡಿಗೆ ಅಪಾರ ; ಜೆ.ಜಿ.ನಾಗರಾಜ್

ಕೋಲಾರ, ಮೇ ೨೯- ಕನ್ನಡ ನಾಡಿನ ಮೊದಲ ಕನ್ನಡದ ರಾಜವಂಶ ಕದಂಬರದ್ದಾಗಿದ್ದು ನಾಡಿಗೆ ಇವರ ಕೊಡುಗೆ ಅಪಾರವಾದದ್ದೆಂದು ಸಾಹಿತಿಗಳಾದ ಜೆ.ಜಿ.ನಾಗರಾಜ ರವರು ಕದಂಬ ಮಯೂರ ಶರ್ಮ ಎಂಬ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಮಾತನಾಡಿದರು.
ನಗರದ ಡೊಂಲೈಟ್ ವೃತ್ತದ ಸಮೀಪದ ಜಯ ಕರ್ನಾಟಕದ ಜಿಲ್ಲಾ ಘಟಕದ ಕಚೇರಿಯಲ್ಲಿ ’ಕನ್ನಡದ ರಾಜವಂಶ ಕದಂಬರು ಒಂದು ನೆನಪು’ ರೂಪಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿ ಈ ನೆಲದಲ್ಲಿ ಮೊದಲು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಆದೇಶಿಸಿ ಕನ್ನಡದ ಆಳ್ವಿಕೆಯನ್ನು ಮಾಡಿದ ಮೊದಲ ರಾಜ ವಂಶ ಕದಂಬರಾಗಿದ್ದು ಇವರು ಸ್ಕಂಧ ಎಂಬ ಕನ್ನಡ ನಾಣ್ಯವನ್ನು ಚಲಾವಣೆಗೆ ತಂದಿರುತ್ತಾರೆ. ಇವೆಲ್ಲವೂ ಸಹ ಇಂದಿನ ಪೀಳಿಗೆಗೆ ಅರ್ಥವಾಗಬೇಕಾಗಿದೆ ಮತ್ತು ಕನ್ನಡದ ಪ್ರೀತಿ ಗಟ್ಟಿಗೊಳ್ಳಬೇಕಾಗಿದೆ ಎಂದರು.
ಡಾ. ರಾಜಕುಮಾರ್ ನಟಿಸಿರುವ ಮಯೂರ ಎಂಬ ಸಿನಿಮಾ ಕದಂಬರ ಮಯೂರ ವರ್ಮನ ಇತಿಹಾಸವನ್ನು ನೆನಪಿಸುವಂತಹದ್ದಾಗಿದ್ದು ಇದರಿಂದ ನಾಡಿನಲ್ಲಿ ಕನ್ನಡ ಅಭಿಮಾನ ಹೆಚ್ಚಾಯಿತು. ಕದಂಬರ ಕಾಲದಲ್ಲಿ ರಚನೆಯಾದ ಹಲ್ಮಿಡಿ ಶಾಸನ ಕ್ರಿ.ಶ.ಸು.೪೫೦ ರದ್ದಾಗಿದ್ದು ಇದು ೧೬ ಸಾಲುಗಳಿಂದ ಕೂಡಿದ್ದು ೨೫ ಕನ್ನಡ ಪದಗಳನ್ನು ಒಳಗೊಂಡಿರುತ್ತದೆ. ಕನ್ನಡದ ಮೊದಲ ಶಾಸನ ಎಂಬ ಹೆಗ್ಗಳಿಕೆಯನ್ನು ಹೊಂದಿರುತ್ತದೆ. ಕದಂಬರ ರಾಜವಂಶವನ್ನು ಅವರ ಕನ್ನಡದ ಬದ್ದತೆಯನ್ನು ಮತ್ತೆ ಇಡೀ ರಾಜ್ಯಾದ್ಯಂತ ಸ್ಮರಣೆ ಮಾಡುವುದರ ಮೂಲಕ ಕನ್ನಡದ ಅಸ್ಮಿತೆಯಾಗ ಬೇಕೆಂದು ಕರೆ ನೀಡಿದರು. ಜಯ ಕರ್ನಾಟಕ ಸಂಘಟನೆಯು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡದ ರಾಜವಂಶವನ್ನು, ಪುನರ್ ಮನನ ಮಾಡುವಂತ ಕಾರ್ಯಕ್ರಮವನ್ನು ರೂಪಿಸಿ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಯ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಆರ್.ತ್ಯಾಗರಾಜ್ ಮಾತನಾಡಿ ನಮ್ಮ ರಾಜ್ಯಾಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸುಮಾರು ಎರಡು ಶತಮಾನಗಳ ಕಾಲ ಕನ್ನಡನಾಡನ್ನು ಆಳಿದ ಕದಂಬ ರಾಜವಂಶವನ್ನು ನೆನಪಿಸುವ ಕಾರ್ಯಕ್ರಮವನ್ನು ರೂಪಿಸಿರುವುದರ ಉದ್ದೇಶ ಇಂದಿನ ಕನ್ನಡಿಗರಿಗೆ ಕದಂಬರ ಕನ್ನಡ ಪ್ರೀತಿಯ ಬದ್ದತೆಯನ್ನು ಅರ್ಥೈಸುವುದಾಗಿದೆ ಎಂದರು.

ಈ ಸಂದರ್ಭದಲ್ಲಿ .ನಗರಸಭೆ ಸದಸ್ಯರಾದ ಎಂ.ಪ್ರಸಾದ್ ಬಾಬು, ಅಶ್ವಥ್ ನಾರಾಯಣಗೌಡ. ನಿವೃತ್ತ ಎ.ಎಸ್.ಐ. ರವಿಂದ್ರನಾಥ್. ರಮೇಶ್ ಬಾಬು. ವಿ.ಸುಬ್ರಮಣಿ. ನಂದೀಶ್ ಕೆ.ಎನ್.ಮುನಿಕೃಷ್ಣ ಎಂ.ಶಭರೀಶ್.ರವಿ ಕೀಲುಕೋಟೆ.ಕೆ.ಎಂ.ಶಿವಕುಮಾರ್. ದನಂಜಯ ಅಭಿಲಾಶ್ ಇನ್ನಿತರರು ಉಪಸ್ಥಿತರಿದ್ದರು.