ಕಥಾರೂಪಕದ ಮೂಲಕ ದೇಶಭಕ್ತಿ ಸಾರಿದ ಮಕ್ಕಳು

ಯಲಹಂಕದ ವಿಶ್ವವಿದ್ಯಾಪೀಠ ಶಾಲೆವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶಭಕ್ತಿ ಸಾರಿದರು.

ಬೆಂಗಳೂರು,ಡಿ.೧೬: ಮಕ್ಕಳಲ್ಲಿ ದೇಶಭಕ್ತಿ ಹಾಗೂ ಜವಾಬ್ದಾರಿಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ನನ್ನ ಸಮಾಜ ನನ್ನ ಜವಾಬ್ದಾರಿ ಎನ್ನುವ ಘೋಷವಾಕ್ಯದಡಿ ಸೈನಿಕರ ಯಶೋಗಾಥೆಗಳನ್ನು ಕಥಾರೂಪಕದಲ್ಲಿ ಪ್ರಸ್ತುತಪಡಿಸಲಾಯಿತು. ಯಲಹಂಕದ ವಿಶ್ವವಿದ್ಯಾಪೀಠ ಶಾಲೆವತಿಯಿಂದ ಸಂದೀಪ್ ಉನ್ನಿಕೃಷ್ಣನ್ ವೃತ್ತದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ಸಾಮಾಜಿಕ ಜವಾಬ್ದಾರಿಗಳನ್ನು ಕಥಾರೂಪಕ, ಹಾಡು,ನೃತ್ಯದ ಮೂಲಕ ಪ್ರಸ್ತುತಪಡಿಸಿದರು.
ಮುಂಬೈ ದಾಳಿ, ಪುಲ್ವಾಮ ದಾಳಿ, ಸೈನಿಕರ ತ್ಯಾಗ,ಬಲಿದಾನಗಳನ್ನು ಸ್ಮರಿಸುವ ಕಥಾರೂಪಕವನ್ನು ಸೊಗಸಾಗಿ ನಿರೂಪಣೆ ಮಾಡಿತು. ಇನ್ನು, ನಾವಿರುವ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ. ಹೀಗಾಗಿ ಎಲ್ಲಂದರಲ್ಲಿ ಕಸ ಹಾಕದೆ ಸ್ವಚ್ಛತೆ ಕಾಪಾಡಬೇಕು. ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ನೃತ್ಯ ನಾಟಕ ರೂಪದಲ್ಲಿ ಪ್ರದರ್ಶಿಸಲಾಯಿತು.
ದೇಶದ ಧರ್ಮ,ಸಂಸ್ಕೃತಿ, ಆಚಾರ ಕಲೆಗಳನ್ನು ಮಕ್ಕಳು ನೃತ್ಯ ಪ್ರಾಕಾರದ ಮೂಲಕ ಮನಸೂರೆಗೊಳ್ಳುವಂತೆ ನರ್ತಿಸಿದರು. ಮಕ್ಕಳಲ್ಲಿನ ಬದ್ಧತೆ, ದೇಶಭಕ್ತಿಯ ಅನಾವರಣ ನೋಡಿದ ಸಭಿಕರು ಕಣ್ಣಂಚಲ್ಲಿ ನೀರು ಬರಿಸಿತು. ಒಟ್ಟಾರೆಯಾಗಿ ಸಂಜೆಯ ಕಾರ್ಯಕ್ರಮ ಅರ್ಥಪೂರ್ಣವಾಗಿಸಿತ್ತು. ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಬಿತ್ತು.
ಈ ವೇಳೆ ವಿಶ್ವವಿದ್ಯಾಪೀಠ ಶಾಲೆಯ ಕನ್ನಡ ವಿಭಾಗದ ಶಿಕ್ಷಕಿ ಮಂಜುಳ ಮಾತನಾಡಿ, ಮಕ್ಕಳಲ್ಲಿ ನಾನಾರೀತಿ ಪ್ರತಿಭೆಗಳು ಇರುತ್ತವೆ. ಅದನ್ನು ದೇಶಭಕ್ತಿ ಸಾರುವ ನೃತ್ಯ,ಕಥಾರೂಪಕಗಳ ಮೂಲಕ ಅನಾವರಣ ಮಾಡಲು ವಿಶ್ವವಿದ್ಯಾಪೀಠ ಸಂಸ್ಥೆ ವೇದಿಕೆ ನೀಡಿರುವುದು ವಿಶೇಷವಾಗಿದೆ. ಖಾಸಗಿ ಶಾಲೆಗಳು ಕನ್ನಡವೆಂದರೆ ಕಡೆಗಣಿಸುತ್ತವೆ ಎಂಬ ಆರೋಪವಿದೆ.ನಮ್ಮ ಶಾಲೆ ಈ ಮಾತಿಗೆ ತದ್ವಿರುದ್ಧವಾಗಿ ಕನ್ನಡ ಹಾಗೂ ಸಂಸ್ಕೃತಿ ಪಸರಿಸುವ ಕಾಯಕದಲ್ಲಿ ನಿರತವಾಗಿದೆ ಎಂದರು.ಮಕ್ಕಳ ಪೋಷಕರು ಹಾಗೂ ಸಭಿಕರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಜೊತೆಗೆ ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಇಂತಹ ನೂರಾರು ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ ಎಂದು ಒಕ್ಕೂರಲಿನಿಂದ ಹೇಳಿದರು.