ಕತ್ರಿನಾ-ವಿಕ್ಕಿ ವಿವಾಹಕ್ಕೆ ಭರ್ಜರಿ ಸಿದ್ಧತೆ

ಮುಂಬೈ, ಡಿ ೭- ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಬಾಲಿವುಡ್‌ನ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇದೀಗ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮುಂಬೈನ ವಿಮಾನನಿಲ್ದಾಣದಿಂದ ಈ ಜೋಡಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿರುವ ದೃಶ್ಯವಳಿಗಳು ಕ್ಯಾಮಾರದಲ್ಲಿ ಸೆರೆಯಾಗಿವೆ.

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ಧೂರಿ ವಿವಾಹ ಕಾರ್ಯಕ್ರಮ ಡಿಸೆಂಬರ್ ೯ರಂದು ಜರುಗಲಿದ್ದು, ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಸೆಂಬರ್ ೭ರಿಂದ ೧೦ರವರೆಗೆ ಮದುವೆ ಕಾರ್ಯಕ್ರಮ ನಡೆಯಲಿದೆ. ಈ ಮಧ್ಯೆ ಇವರ ಮದುವೆಗೆ ಬೌನ್ಸರ್‌ಗಳನ್ನು ನಿಯೋಜನೆ ಮಾಡಲಾಗಿದೆ.

ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ ಕತ್ರಿನಾ-ವಿಕ್ಕಿಕನಸಿನ ಲೋಕದ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಬಾಲಿವುಡ್‌ನ ಪ್ರಣಯ ಪಕ್ಷಿಗಳು ಆಸೆಪಟ್ಟಿದ್ದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವರ ವಿಕ್ಕಿ ಕೌಶಲ್ ಏಳು ಬಿಳಿ ಕುದುರೆಗಳ ಜೊತೆಗೆ ಕಲ್ಯಾಣ ಮಂಟಪಕ್ಕೆ ಪ್ರವೇಶ ನೀಡಲಿದ್ದಾರೆ. ನಾಳೆಯಿಂದ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಇಂದು ಈ ಜೋಡಿ ಮುಂಬೈನಿಂದ ಪ್ರಯಾಣ ಬೆಳೆಸಿತು.

ಇದರ ಜೊತೆಗೆ ಮುಂಬೈ ಮೂಲದ ಈವೆಂಟ್ ಕಂಪನಿಯು ಮಾತಾ ಟ್ರಸ್ಟ್ ಧರ್ಮಶಾಲಾದಲ್ಲಿ ೧೫೦ ಅತಿಥಿಗಳಿಗಾಗಿ ೨೭ ಕೊಠಡಿಗಳು ಮತ್ತು ಐದು ಸಭಾಂಗಣಗಳನ್ನು ಕಾಯ್ದಿರಿಸಿದೆ. ಮದುವೆಗೆ ಆಗಮಿಸುತ್ತಿರುವ ಅತಿಥಿಗಳಿಗೆ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಆರ್ಟಿ-ಪಿಸಿಆರ್ ವರದಿ ತೆಗೆದುಕೊಂಡು ಬರುವಂತೆ ಸೂಚನೆ ನೀಡಲಾಗಿದೆ.

ಏತನ್ಮಧ್ಯೆ, ಅಕ್ಷಯ್ ಕುಮಾರ್, ಶಾರುಖ್ ಖಾನ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ರೋಹಿತ್ ಶೆಟ್ಟಿ, ಹೃತಿಕ್ ರೋಷನ್ ಮತ್ತು ಅಲಿ ಅಬ್ಬಾಸ್ ಜಾಫರ್ ಕೂಡ ಮದುವೆಗೆ ಹಾಜರಾಗಬಹುದು. ಆದಾಗ್ಯೂ, ಅವರ ಉಪಸ್ಥಿತಿಯನ್ನು ಇನ್ನೂ ದೃಢೀಕರಿಸಲಾಗಿಲ್ಲ. ವಿವಿಐಪಿ ಅತಿಥಿಗಳಿಗಾಗಿ ದಂಪತಿಗಳ ವಿವಾಹ ಯೋಜಕರು ೮ ರಿಂದ ೧೦ ಟೆಂಟ್‌ಗಳನ್ನು ಕಾಯ್ದಿರಿಸಿದ್ದಾರೆ ಎಂದು ಹೋಟೆಲ್ ಮೂಲ ದೃಢಪಡಿಸಿದೆ. ಟೆಂಟ್‌ಗಳ ಪ್ರತಿ ರಾತ್ರಿ ಬಾಡಿಗೆ ೭೦,೦೦೦ ರೂ.ಗಳಿಂದ ಪ್ರಾರಂಭವಾಗುತ್ತದೆ.