ಕತ್ರಿನಾ ಮದುವೆ ಮೆಹೆಂದಿಗೆ 1 ಲಕ್ಷ ರೂ. ವೆಚ್ಚ

ಮುಂಬೈ, ನ ೨೭- ನಟ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆಯ ಸಿದ್ಧತೆಗಳು ನಡೆಯುತ್ತಿವೆ. ಇನ್ನು ಕತ್ರೀನಾ ಮೆಹಂದಿಯ ಮೌಲ್ಯ ೧ ಲಕ್ಷ ರೂ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿಯಾಗಿದೆ.
ಇವರ ವಿವಾಹ ಡಿಸೆಂಬರ್‌ನಲ್ಲಿ ರಾಜಸ್ಥಾನದ ಐಷಾರಾಮಿ ಕೋಟೆ – ರೆಸಾರ್ಟ್‌ನಲ್ಲಿ ನಡೆಯಲಿದ್ದು, ವರದಿಗಳ ಪ್ರಕಾರ, ವಿಕ್ಕಿ ಮತ್ತು ಕ್ಯಾಟ್ ಮದುವೆ ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ನಡೆಯಲಿದೆ, ಆದರೆ ಅದಕ್ಕಿಂತಲೂ ಮೊದಲು ಈ ಜೋಡಿ ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳಲಿದೆಯಂತೆ. ಇಬ್ಬರು ಜನಪ್ರಿಯ ತಾರೆಯರ ವೈಭವದ ಮದುವೆಯನ್ನು ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ವಧು ವರರ ಮದುವೆ ಉಡುಗೆ ಸೇರಿದಂತೆ ಮದುವೆ ಸಂಬಂಧಿಸಿದ ಮಾಹಿತಿಗಳು ಬಹಿರಂಗವಾಗಿವೆ. ಇದೀಗ ಬಂದಿರುವ ಮತ್ತೊಂದು ಸುದ್ದಿ, ಮದುವೆಯಲ್ಲಿ ಕತ್ರೀನಾ ಕೈಯನ್ನು ಅಲಂಕರಿಸಲಿರುವ ಮದರಂಗಿಯದ್ದು ರಾಜಸ್ಥಾನದ ಜೋಧಪುರದ ಪಾಲಿ ಜಿಲ್ಲೆಯಿಂದ ಸೋಜತ್ ಮೆಹಂದಿಯನ್ನು ಮದುವೆಯ ದಿನ ಕತ್ರೀನಾರಿಗೆ ಕಳುಹಿಸಲಾಗುವುದಂತೆ. ಆ ಮದರಂಗಿಯ ಮೌಲ್ಯ ೧ ಲಕ್ಷ ರೂ ಎನ್ನಲಾಗಿದೆ.
ಸೊಜತ್‌ನ ಕುಶಲಕರ್ಮಿಗಳು ನೈಸರ್ಗಿಕವಾಗಿ ಮೆಹಂದಿ ತಯಾರಿಸುತ್ತಿದ್ದು, ಅವರು ಅದಕ್ಕೆ ಯಾವುದೇ ರಾಸಾಯನಿಕ ಸೇರಿಸುತ್ತಿಲ್ಲ. ಅದನ್ನು ಕೈಯಲ್ಲೇ ತಯಾರಿಸಲಾಗುತ್ತದೆ. ಗುಪ್ತವಾಗಿ ರೋಕಾ ಸಮಾರಂಭ ಮಾಡಿಕೊಂಡಿದ್ದ ಈ ಜೋಡಿ, ತಮ್ಮ ಮದುವೆಗೆ ಬರಲಿರುವ ಅತಿಥಿಗಳ ಪಟ್ಟಿಯನ್ನು ಕೂಡ ರಹಸ್ಯವಾಗಿಯೇ ಇಡಲು ಪ್ರಯತ್ನಿಸುತ್ತಿದೆ.