ಕತ್ರಿನಾ ದಂಪತಿಗೆ ಕೊಲೆ ಬೆದರಿಕೆ

ಮುಂಬೈ, ಜು ೨೫- ಇತ್ತೀಚೆಗೆ ಸಪ್ತಪದಿ ತುಳಿದ ಬಾಲಿವುಡ್ ಸ್ಟಾರ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಿಗೆ ವ್ಯಕ್ತಿಯೊಬ್ಬನಿಂದ ಜೀವ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅಪರಿಚಿತರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಗೆ ಸೋಷಿಯಲ್ ಮೀಡಿಯಾದ ಮೂಲಕ ಜೀವ ಬೆದರಿಕೆ ಬಂದಿದೆ. ಈ ಬಗ್ಗೆ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ ೫೦೬(೨), ೩೫೪(ಡಿ) ಐಟಿ ಕಾಯ್ದೆಯ ಸೆಕ್ಷನ್ ೬೭ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ವ್ಯಕ್ತಿ ಬೆದರಿಕೆಯ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾನೆ ಎಂದು ಕೌಶಲ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯು ತನ್ನ ಪತ್ನಿ ಕತ್ರಿನಾಳನ್ನು ಹಿಂಬಾಲಿಸಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ. ಪಂಜಾಬಿ ಗಾಯಕ ಸಿಧು ಮುಸೇವಾಲಾ ಹತ್ಯೆಯಾದ ನಂತರ, ಸೆಲೆಬ್ರಿಟಿಗಳನ್ನು ಬಿಡದಂತೆ ಕೊಲ್ಲುವ ಬೆದರಿಕೆಗಳು ನಿರಂತರವಾಗಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿತ್ತು.
ಘಟನೆಯ ನಂತರ ಸಲ್ಮಾನ್ ಮತ್ತು ಅವರ ಕುಟುಂಬದ ಭದ್ರತೆಯನ್ನು ಹೆಚ್ಚಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ವ್ಯಕ್ತಿಗಳಿಂದ ಹಣ ಸುಲಿಗೆ ಮಾಡಲು ಬಯಸಿತ್ತು. ಸಲ್ಮಾನ್ ಹೊಸದಾಗಿ ನೇಮಕಗೊಂಡ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ದಕ್ಷಿಣ ಮುಂಬೈನಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾದರು. ಮೂಲಗಳ ಪ್ರಕಾರ, ನಟ ಶಸ್ತ್ರಾಸ್ತ್ರ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ
ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ಬೆದರಿಕೆಗಳು ಬರುತ್ತಿವೆ ಮತ್ತು ಆರೋಪಿಗಳು ಕತ್ರಿನಾ ಕೈಫ್ ಅವರನ್ನು ಹಿಂಬಾಲಿಸಿ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ