ಕತ್ತಿ, ಲಿಂಬಾವಳಿ, ಮುನಿ, ಯೋಗಿ ಅಂಗಾರ, ಎಂಟಿಬಿ, ಶಂಕರ್‌ಗೆ ಶುಕ್ರದೆಸೆ

ಬೆಂಗಳೂರು, ಜ. ೧೨- ನಾಳೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿರುವಾಗಲೇ ಯಾರು ಸಚಿವರಾಗುತ್ತಾರೆ, ಯಾರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದ್ದು, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರುಗಳು ಸಚಿವ ಸ್ಥಾನಸಿಗುತ್ತದೋ, ಇಲ್ಲವೋ ಎಂಬ ತೋಳಲಾಟದಲ್ಲಿದ್ದಾರೆ.
ಸಂಪುಟ ಪುನಾರಚನೆಯಾಗುವುದಿಲ್ಲ. ವಿಸ್ತರಣೆಗಷ್ಟೆ ಸೀಮಿತವಾಗಲಿದೆ. ಹಾಗಾಗಿಯೇ ಯಾರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಸಂಪುಟಕ್ಕೆ ಹೊಸದಾಗಿ ೬-೭ ಸಚಿವರುಗಳು ಸೇರ್ಪಡೆಯಾಗಲಿದ್ದಾರೆ ಅಷ್ಟೆ ಎಂದು ಹೇಳಲಾಗುತ್ತಿದೆಯಾದರೂ ಕೊನೆ ಗಳಿಗೆಯಲ್ಲಿ ಹೈಕಮಾಂಡ್ ಪುನಾರಚನೆ ಒಪ್ಪಿದರೆ ಹೀಗಿರುವ ನಾಲ್ಕೈದು ಸಚಿವರನ್ನು ಕೈಬಿಟ್ಟು ೮-೧೦ ನೂತನ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳು ಇವೆ.
ರಾಜ್ಯ ಸಚಿವ ಸಂಪುಟದಲ್ಲಿ ಸದ್ಯ ೭ ಸ್ಥಾನಗಳು ಖಾಲಿ ಇದ್ದು, ಈ ೭ ಸ್ಥಾನಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಭರ್ತಿ ಮಾಡಲು ತೀರ್ಮಾನಿಸಿದ್ದಾರೆ. ಅದರಂತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ವಲಸಿಗ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕ ಮುನಿರತ್ನ, ವಿಧಾನಪರಿಷತ್ ಸದಸ್ಯ ಎಂ,ಟಿ.ಬಿ. ನಾಗರಾಜು, ಆರ್.ಶಂಕರ್ ಇವರುಗಳಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಉಳಿದಂತೆ ಬಿಜೆಪಿಯ ಹಿರಿಯ ಶಾಸಕರಾದ ಉಮೇಶ್‌ಕತ್ತಿ, ಎಸ್.ಎಸ್. ಅಂಗಾರ, ಅರವಿಂದ ಲಿಂಬಾವಳಿ, ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.
ಯಾರನ್ನು ಸಚಿವರನ್ನಾಗಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಪಕ್ಷದ ವರಿಷ್ಠರ ಜತೆ ಚರ್ಚೆ ನಡೆಸಿದ್ದು, ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಇಂದು ಸಂಜೆ ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು.
ರಾಜ್ಯ ಬಿಜೆಪಿ ಉಸ್ತವಾರಿ ಅರುಣ್‌ಸಿಂಗ್ ಅವರ ಜತೆ ಮುಖ್ಮಯಮಂತ್ರಿಗಳು ದೂರವಾಣಿಯಲ್ಲಿ ಮಾತನಾಡಿ ನೂತನ ಸಚಿವರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆಗಷ್ಟೇ ಸೀಮಿತವಾಗಿರುವುದರಿಂದ ೭ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ತೀರ್ಮಾನವೂ ಆಗಿದೆ. ಅದರಂತೆ ರಾಜ್ಯಭವನಕ್ಕೆ ನೂತನ ಸಚಿವ ಪಟ್ಟಿ ರವಾನೆಯಾಗಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ನಾಳೆ ಬೆಳಗ್ಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರು ಬಂದ ನಂತರ ಅಂತಿಮ ಕ್ಷಣದಲ್ಲಿಪಟ್ಟಿಯಲ್ಲಿ ಕೆಲ ಬದಲಾವಣೆಯಾದಲು ಅಚ್ಚರಿ ಇಲ್ಲ.
ಈಗಿರುವ ಪ್ರಕಾರ ಶಾಸಕ ಮುನಿರತ್ನ, ವಿಧಾನಪರಿಷತ್ ಸದಸ್ಯ ಎಂ.ಟಿ. ಬಿ. ನಾಗರಾಜ್, ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಉಮೇಶ್‌ಕತ್ತಿ, ಅರವಿಂದಲಿಂಬಾವಳಿ, ಎಸ್.ಎಸ್. ಅಂಗಾರ ನೂತನ ಸಚಿವರಾಗುವುದು ಬಹುತೇಕ ನಿಶ್ಚಿತ.
ಇವರ ಜತೆಗೆ ಮುರುಗೇಶ್ ನಿರಾಣಿ, ರಾಜುಗೌಡ, ಹಾಲಪ್ಪ ಆಚಾರ್, ಬಸವನಗೌಡ ಪಾಟೀಲ್ ಯತ್ನಾಳ್, ಪೂರ್ಣಿಮಾಶ್ರೀನಿವಾಸ್ ಇವರುಗಳ ಹೆಸರು ಸಹ ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದ್ದು, ಕೊನೆಘಳಿಗೆಯಲ್ಲಿ ಮುರುಗೇಶ್ ನಿರಾಣಿ ಇಲ್ಲವೆ ಬಸವನಗೌಡಪಾಟೀಲ್ ಯತ್ನಾಳ್ ರವರ ಹೆಸರು ನೂತನ ಸಚಿವರ ಪಟ್ಟಿಯಲ್ಲಿ ಸೇರ್ಪಡೆಯಾದರೂ ಅಚ್ಚರಿ ಇಲ್ಲ.
ಈಗ ಆಗಿರುವ ತೀರ್ಮಾನದಂತೆ ವಲಸಿಗ ಶಾಸಕರಿಗೆ ಮೂರು ಸ್ಥಾನ, ಉಳಿದಂತೆ ವರಿಷ್ಠರು ಹೇಳುವವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ.
ಸಚಿವ ನಾಗೇಶ್ ರವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇರುವುದರಿಂದ ಆ ಸ್ಥಾನವನ್ನು ಖಾಲಿ ಉಳಿಸಿಕೊಂಡು ಮುಂದೆ ನಡೆಯುವ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರತಾಪ್‌ಗೌಡ ಪಾಟೀಲ್ ಗೆದ್ದರೆ ಅವರಿಗೆ ಸಚಿವ ಸ್ಥಾನ ನೀಡುವ ಲೆಕ್ಕಾಚಾರವು ನಡೆದಿದೆ.
ಯಾರು ಸಚಿವರಾಗುತ್ತಾರೆ, ಸಂಪುಟ ವಿಸ್ತರಣೆಯೋ,ಪುನಾರಚನೆಯೋ ಎಲ್ಲವೂ ಇಂದು ಸಂಜೆ ಇತ್ಯರ್ಥವಾಗಲಿದೆ.

ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯುವುದು ಪಕ್ಕಾನಾ, ಇಲ್ಲವಾ ಎಂಬ ಅನುಮಾನಗಳು ಸೃಷ್ಟಿಯಾಗಿವೆ.
ಸಂಪುಟ ವಿಸ್ತರಣೆಯ ಮಹೋರ್ತ ನಿಗದಿಯಾಗಿರುವ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, “ಬಹುಪಾಲು” ನಾಳೆ ಸಂಜೆ ೪ ಗಂಟೆಗೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ವಿಸ್ತರಣೆ ಬಹುಪಾಲು ಎಂಬ ಶಬ್ದ ಬಳಸಿರುವುದು ಸಂಪುಟ ನಾಳೆ ನಡೆಯುವುದು ಪಕ್ಕನಾ, ಇಲ್ಲ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗುತ್ತದೆಯೋ ಎಂಬ ಅನುಮಾನಗಳಿಗೂ ಕಾರಣವಾಗಿದೆ.
ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ನಡೆಯುವುದು ನಿಶ್ಚಿತ ಎಂದು ಹೇಳದೆ ಬಹುಪಾಲು ಸಂಪುಟ ವಿಸ್ತರಣೆಯಾಗಲಿದೆ ಎಂಬ ಪದ ಬಳಸಿರುವುದು ನಾನಾ ವ್ಯಾಖ್ಯಾನಗಳಿಗೂ ಕಾರಣವಾಗಿದೆ.