ಕತ್ತಲೆ ಕಳೆಯಲು ಬೆಳಕಿನ ಕಿರಣ ಮುಖ್ಯ : ರಂಭಾಪುರಿ ಶ್ರೀ

ರಿಪ್ಪನ್‌ಪೇಟೆ.ನ.19; ಕತ್ತಲೆ ಅಜ್ಞಾನದ ಸಂಕೇತವಾದರೆ ಬೆಳಕು ಜ್ಞಾನದ ಸಂಕೇತ. ಬಾಹ್ಯ ಕತ್ತಲೆ ಕಳೆಯಲು ದೀಪ ಬೇಕು. ಮನದ ಅಜ್ಞಾನ ದೂರ ಮಾಡಲು ಜ್ಞಾನ ಬೋಧಾಮೃತ ಬೆಳಕಿನ ಕಿರಣ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಸಮೀಪದ ಶ್ರೀಮದ್ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ಮನುಷ್ಯನ ಸ್ವಭಾವ ಕೂಡಾ ದೀಪದಂತಿರಬೇಕು. ಅಂಗಳದಲ್ಲಿ ಹುಲ್ಲು ವೇಗವಾಗಿ ಬೆಳೆದಷ್ಟು ಬಿಲ್ವ ವೃಕ್ಷ ಬೆಳೆಯುವುದಿಲ್ಲ. ಮೋಸ ವಂಚನೆ ಮಾಡುವ ಮನುಷ್ಯ ಬಹು ಬೇಗ ಬೆಳೆಯುವಂತೆ ಒಳ್ಳೆಯವರು ಬೆಳೆಯುವುದಿಲ್ಲ. ನಡೆಯುವ ದಾರಿಯಲ್ಲಿ ನಿಯತ್ತು ಇದ್ದರೆ ಅದನ್ನು ತಡೆಯುವ ತಾಕತ್ತೂ ಯಾರಿಗೂ ಇರುವುದಿಲ್ಲ. ಹಣದಿಂದ ಕಟ್ಟಿದ ಮನೆಯಲ್ಲಿ ಎಲ್ಲರೂ ಇರುತ್ತಾರೆ. ಆದರೆ ಗುಣದಿಂದ ಕಟ್ಟಿದ ಮನೆಯಲ್ಲಿ ಯೋಗ್ಯರಷ್ಟೇ ನೆಲೆಸುತ್ತಾರೆ. ಪ್ರಾಮಾಣಿಕ ಸಂಬAಧಗಳು ಶುದ್ಧ ನೀರಿನ ಹಾಗೆ. ಅವುಗಳಿಗೆ ಬಣ್ಣ ಆಕಾರ ಇರುವುದಿಲ್ಲ. ಆದರೂ ನೀರು ಅತ್ಯವಶ್ಯಕ. ಸತ್ಯ ಮನುಷ್ಯನನ್ನು ಬದಲಿಸುತ್ತದೆ. ಆದರೆ ಸತ್ಯವನ್ನು ಯಾರಿಂದಲೂ ಬದಲಿಸಲಾಗದು. ವೀರಶೈವ ಧರ್ಮ ಮಾನವೀಯ ಸಂಬಂಧಗಳನ್ನು ಬೆಸೆದು ಸಮಾಜದಲ್ಲಿ ಸಾಮರಸ್ಯ ಶಾಂತಿ ನೆಲೆಗೊಳಿಸಲು ಸಾಧ್ಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮಳಲಿ ಸಂಸ್ಥಾನ ಮಠ ಶ್ರೀ ರಂಭಾಪುರಿ ಖಾಸಾ ಶಾಖಾ ಮಠವಾಗಿದ್ದು ಪ್ರತಿ ವರ್ಷ ಕಾರ್ತೀಕ ದೀಪೋತ್ಸವ ಸಮಾರಂಭವನ್ನು ಅದ್ದೂರಿಯಿಂದ ಆಚರಿಸುತ್ತಿರುವುದು ತಮಗೆ ಸಂತಸ ತಂದಿದೆ. ಇಂದಿನ ಪಟ್ಟಾಧ್ಯಕ್ಷರಾದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಕ್ರಿಯಾಶೀಲ ಬದುಕನ್ನು ಹೊಂದಿ ಮಲೆನಾಡ ಭಕ್ತರ ಬಾಳಿಗೆ ಆಶಾಕಿರಣರಾಗಿದ್ದಾರೆ. ಶ್ರೀಗಳವರಿಂದ ಇನ್ನಷ್ಟು ಅಭಿವೃದ್ಧಿ-ಜನಹಿತ ಕಾರ್ಯಗಳು ನಡೆಯಲೆಂದು ರೇಶ್ಮೆ ಮಡಿ ಹೊದಿಸಿ ಫಲ ಪುಷ್ಟವಿತ್ತು ಶುಭ ಹಾರೈಸಿದರು.   ಬಂಕಾಪುರದ ರೇವಣಸಿದ್ಧ ಶ್ರೀ, ಕವಲೇದುರ್ಗದ ಮರುಳಸಿದ್ಧ ಶ್ರೀ, ಶಾಂತಪುರ ಶಿವಾನಂದ ಶ್ರೀ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶ್ರೀ, ಸಂಗೊಳ್ಳಿ ಗುರುಲಿಂಗ ಶ್ರೀ, ಕಡೇನಂದಿಹಳ್ಳಿ-ದುಗ್ಲಿಯ ರೇವಣಸಿದ್ಧ ಶ್ರೀಗಳವರು ಸಮಾರಂಭದ ಸಮ್ಮುಖವನ್ನು ವಹಿಸಿದ್ದರು.