ಕತ್ತಲು ರಾತ್ರಿ ಪದ್ಧತಿ ನಿರ್ಮೂಲನೆಯಾದ್ರೆ ರಾಜಕೀಯ ಶುದ್ಧೀಕರಣ ಸಾಧ್ಯ: ಜಿ. ಬಿ. ವಿನಯ್ ಕುಮಾರ್


ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.5: ಇಂದಿನ ರಾಜಕಾರಣ ಕಲುಷಿತಗೊಂಡಿದೆ. ಕತ್ತಲು ರಾತ್ರಿ ಎಂಬುದು ಪ್ರಜಾಪ್ರಭುತ್ವದಲ್ಲಿ ಪದ್ಧತಿಯಾಗಿ ಮುಂದುವರಿದಿದೆ. ಚುನಾವಣಾ ಹಿಂದಿನ ರಾತ್ರಿಯಂದು ನಡೆಯುವ ಕತ್ತಲು ರಾತ್ರಿ ಆಟ ನಿಲ್ಲಬೇಕು. ಇದರ ನಿರ್ಮೂಲನೆ ಆಗಬೇಕು. ರಾಜಕಾರಣದಲ್ಲಿ ಇಂಥ ಕೆಟ್ಟ ಪದ್ಧತಿ ತೊಲಗಿದಾಗ ಮಾತ್ರ ರಾಜಕಾರಣದಲ್ಲಿ ಶುದ್ಧೀಕರಣ ಆಗುತ್ತದೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಕಕ್ಕರಗೊಳ್ಳ ಅಭಿಪ್ರಾಯಪಟ್ಟರು.ಇನ್ ಸೈಟ್ಸ್ ಐಎಎಸ್ ಅಕಾಡೆಮಿ ಹಾಗೂ ಸ್ವಾಭಿಮಾನಿ ಬಳಗವು ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲೆಯ ಯುವಕರಿಗಾಗಿ ಏರ್ಪಡಿಸಲಾಗಿದ್ದ ನಾಯಕತ್ವ ತರಬೇತಿ ಕಾರ್ಯಾಗಾರಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ವೇಳೆ ನಡೆಯುವ ಅಕ್ರಮಗಳು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಚಾರ ಎಂದು ಅಭಿಪ್ರಾಯಪಟ್ಟರು.ಮಾಧ್ಯಮಗಳು ಇಂದಿನ ದಿನಗಳಲ್ಲಿ ಅಧಿಕಾರಸ್ಥರ ಕಪಿಮುಷ್ಟಿಯಲ್ಲಿವೆ. ಸರಿಯಾದ ಮಾಹಿತಿ ಬಿತ್ತರಿಸುತ್ತಿಲ್ಲ ಎಂಬ ಜನರ ಮಾತಾಗಿದೆ. ಸ್ವತಂತ್ರವಾಗಿ  ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ. ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯದ ಬಗ್ಗೆ ಮಾಹಿತಿ ಎಲ್ಲರಿಗೂ ಇಲ್ಲ. ಮಾಧ್ಯಮಗಳು ಇದನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಹೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರತಿ ಗ್ರಾಮಗಳಲ್ಲಿಯೂ ಸ್ವಾಭಿಮಾನಿಗಳಾಗಿ, ಹೋರಾಟಗಾರರಾಗಿ, ಎಷ್ಟೇ ವಿರೋಧ ಇದ್ದರೂ ಜನರನ್ನು ಮನೆ ಮನೆಗೆ ಹೋಗಿ ನಾವು ತಲುಪಿದ್ದೇವೆ. 1946 ಬೂತ್ ಗಳಲ್ಲಿಯೂ ವಿನಯ್ ಕುಮಾರ್ ಗೆ ಮತ ನೀಡುವಂತೆ ಮನವಿ ಮಾಡಿದ್ದೀರಾ. ಒಳ್ಳೆಯ ರಾಜಕಾರಣದಿಂದ ಈ ಕೆಲಸ ಆಗಿದೆ. ಕಳೆದೊಂದು ವರ್ಷದಲ್ಲಿ ಯಾರನ್ನೂ ದ್ವೇಷವನ್ನೂ ಮಾಡದೇ ಚುನಾವಣೆ ಎದುರಿಸಿದ್ದೇವೆ. ನಾವೆಲ್ಲರೂ ಸೇರಿಕೊಂಡು ಆರೋಗ್ಯಕರ ಚುನಾವಣೆ ನಡೆಸಿದ್ದೇವೆ ಎಂದು ಹೇಳಿದರು. ನನ್ನ ರಾಜಕೀಯ ಗುಣ ಮೆಚ್ಚಿ ಗುರುತಿಸುವ ಜೊತೆಗೆ ನಿಂತವರು ಸಾಕಷ್ಟು ಮಂದಿ. ಸುಳ್ಳು ಸುದ್ದಿ ಹಬ್ಬಿಸಿದರೂ ನಂಬದೇ  ಇದನ್ನು ವಿರೋಧಿಸಿ ನನ್ನ ಪರವಾಗಿ ಗಟ್ಟಿಯಾಗಿ ಬಂದಿದ್ದು ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.