ಕಣ್ವ ಕ್ರೆಡಿಟ್ ಕೋ ಆಪರೇಟಿವ್ ವಂಚನೆ ಹಗರಣ: ಸಿಬಿಐ ತನಿಖೆಗೆ ನಮೋಶಿ ಆಗ್ರಹ

ಕಲಬುರಗಿ,ಆ.16: ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಹಗರಣದಿಂದ ಸಾವಿರಾರು ಜನರು ನೊಂದಿದ್ದು, ಅವರಿಗೆ ನ್ಯಾಯ ದೊರಕಿಸಿಕೊಡಲು ರಾಜ್ಯ ಸರ್ಕಾರವು ಹಗರಣದ ಕುರಿತು ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಶಶೀಲ್ ಜಿ. ನಮೋಶಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 23000 ಜನರಿಗೆ 15000 ಕೋಟಿ ರೂ.ಗಳನ್ನು ವಂಚನೆ, ಲೂಟಿ, ಬೇರೆ, ಬೇರೆ ಕಡೆಗೆ ಹೂಡಿಕೆ ಮಾಡಿದ್ದಾರೆ. ಕೇವಲ ರಾಜ್ಯ ಅಷ್ಟೇ ಅಲ್ಲ, ಹೊರ ರಾಜ್ಯಗಳಲ್ಲಿಯೂ ಬಂಡವಾಳ ಹೂಡಿ ಒಟ್ಟಾರೆ ದಿವಾಳಿ ಮಾಡಿದ್ದಾರೆ ಎಂದು ದೂರಿದರು.
ಹಗರಣದಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ಒಂದು ಸಾವಿರ ಜನರು ಮೋಸ ಹೋಗಿದ್ದಾರೆ. ಈ ಭಾಗದ ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ್, ಯಾದಗಿರಿ ಮತ್ತು ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಸಂತ್ರಸ್ತರು ನ್ಯಾಯಕ್ಕಾಗಿ ಸಂಘಟನೆಯನ್ನು ಮಾಡಿಕೊಂಡಿದ್ದಾರೆ. ವಶಿಷ್ಟ ಬ್ಯಾಂಕ್ ಅದೂ ಕೂಡ 350 ಕೋಟಿ ರೂ.ಗಳು ಹೂಡಿಕೆಯಾಗಿದ್ದು, ಚಂದ್ರಶೇಖರ್ ಅವರು ವಂಚನೆಗೆ ಒಳಗಾಗಿದ್ದಾರೆ. ಬೆಂಗಳೂರು ಸುತ್ತಮುತ್ತಲು ಹೂಡಿಕೆ ಇಂತಹ ವಂಚನೆಯ ಬ್ಯಾಂಕ್ ಇವೆ ಎಂದು ಅವರು ದೂರಿದರು.
ಕಣ್ವ ಹಗರಣದ ಸಂತ್ರಸ್ತರ ನಿಯೋಗವು ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಕಲಬುರ್ಗಿ, ಭದ್ರಾವತಿ, ದಾವಣಗೆರೆ, ಹೊಸಪೇಟೆ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ- ಧಾರವಾಡ್, ಗದಗ್ ಸೇರಿದಂತೆ ಸಂತ್ರಸ್ತರು ನನಗೆ ಕಳೆದ 14ರಂದು ಸೋಮವಾರ ನನ್ನ ನಿವಾಸದಲ್ಲಿ ಭೇಟಿ ಮಾಡಿದರು. ಹಗರಣದಿಂದ ತಮ್ಮ ವೈಯಕ್ತಿಕ ನೋವುಗಳನ್ನು ಮತ್ತು ಪರಿಶ್ರಮಗಳನ್ನು ಮತ್ತು ತಮ್ಮ ನಿರಂತರ ಹೋರಾಟದ ಕುರಿತು ವಿವರಿಸಿದರು. ಈ ಪ್ರದೇಶಗಳಲ್ಲಿಯೇ ಸುಮಾರು 1000ಕ್ಕೂ ಹೆಚ್ಚು ಸಂತ್ರಸ್ತರು ಬಾಧಿತರಾಗಿದ್ದಾರೆ. ಆದಾಗ್ಯೂ, ರಾಜ್ಯಾದ್ಯಂತ 23000 ಜನರು ಬಾಧಿತರಾಗಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ವಂಚನೆ, ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸುವುದು ಮತ್ತು ಸಂಭಾವ್ಯ ಅಕ್ರಮಗಳ ತನಿಖೆಗಾಗಿ ಸಹಕಾರ ಇಲಾಖೆಯು ಕೆಎಸ್‍ಎಸ್ ಕಾಯ್ದೆಯ ಸೆಕ್ಷನ್ 35ರ ಅಡಿಯಲ್ಲಿ ಕಣ್ವ ಸೌಹಾರ್ದ ಸಹಕಾರಿಯ ಚಟುವಟಿಕೆಗಳ ಅಡಿಯಲ್ಲಿ ವಿಚಾರಣೆಯನ್ನು ಮಾಡಿದೆ. ತನಿಖಾಧಿಕಾರಿಯು ಕಣ್ವ ಸೌಹಾರ್ದ ಸಹಕಾರಿಯು ಮಾಡಿದ 40 ನಿರ್ದಿಷ್ಟ ಅಪರಾಧಗಳನ್ನು ಗುರುತಿಸಿ, ಕಳೆದ 2021ರ ಜುಲೈ 19ರಂದು ಕರ್ನಾಟಕದ ಉಚ್ಛ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದೆ. ವಿಚಾರಣೆಯ ಫಲಿತಾಂಶಗಳನ್ನು ಆಧರಿಸಿ ಕರ್ನಾಟಕ ಮುಖ್ಯ ನ್ಯಾಯಮೂರ್ತಿಗಳು ಕಾಯ್ದೆಯ ಸೆಕ್ಷನ್ 37 ಮತ್ತು 37-ಎ ಪ್ರಕಾರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮತ್ತು ನ್ಯಾಯಾಲಯಕ್ಕೆ ಪ್ರಗತಿ ವರದಿಯನ್ನು ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹಗರಣದ ಕುರಿತು 21 ಎಫ್‍ಐಆರ್‍ಗಳನ್ನು ಹಾಕಲಾಗಿದೆ. ಪ್ರಮುಖ ಆರೋಪಿ ನಂಜುಂಡಯ್ಯ ಎಂಬಾತ ಬ್ಯಾಂಕ್, ಕಂಪೆನಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಆತನೇ ಸ್ವತ: ನಮ್ಮ ಮೇಲೆ 400 ಎಫ್‍ಐಆರ್‍ಗಳು ಇವೆ ಎಂದು ಹೇಳಿದ್ದಾನೆ. ಸರ್ಕಾರ ಕೇವಲ 21 ಎಫ್‍ಐಆರ್ ಹೇಳುತ್ತಿದೆ. ಇದೆಲ್ಲ ದೂರು ಕೊಟ್ಟ ಮೇಲೆ ಇಲಾಖೆಯವರು ಒಂದೂವರೆ ವರ್ಷ ತನಿಖೆ ಮಾಡಿ, 40 ತಪ್ಪುಗಳನ್ನು ಮಾಡಿದ್ದನ್ನು ವರದಿ ಮಾಡಿದ್ದಾರೆ. ಸರ್ಕಾರದ ವ್ಯವಸ್ಥೆಯಲ್ಲಿ ವ್ಯತ್ಯಾಸ, ಏನು ಮಾಡಬೇಕಾಗಿತ್ತು ಎಂಬುದರ ಕುರಿತು ವರದಿ ಸಲ್ಲಿಸಿದ್ದಾರೆ. ಉಚ್ಛ ನ್ಯಾಯಾಲಯಕ್ಕೂ ಹೋಗಿದ್ದಾರೆ. ಮುಖ್ಯ ನ್ಯಾಯಾಧೀಶರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದರೆ ಇನ್ನೂವರೆಗೆ ಸರ್ಕಾರ ಏನೂ ಮಾಡಿಲ್ಲ. ಯಾವ ಪ್ರಮಾಣದಲ್ಲಿ ಅವರ ಹಣ ಮರಳಿಸಬೇಕು ಎಂಬ ಕಳಕಳಿ ಸರ್ಕಾರಕ್ಕೆ ಇಲ್ಲ. ವಂಚನೆ ಮಾಡಿದವರೊಂದಿಗೆ ಶಾಮೀಲಾಗಿ ಏನೂ ತಯಾರು ಮಾಡುತ್ತಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದರು.
ಕಳೆದ 2021ರ ಜುಲೈ 19ರಂದು ತನಿಖಾ ಅಂತಿಮ ವರದಿ ಕೊಡುತ್ತಾರೆ. ಪ್ರಾಸಿಕ್ಯೂಟರ್ ಮಾಡಿರಿ, ತನಿಖೆ ಮಾಡಿರಿ ಎಂದು ನ್ಯಾಯಾಧೀಶರು ಹೇಳಿದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೂ ಬೇರೆ, ಬೇರೆ ಗುರು ರಾಘವೇಂದ್ರ 200 ಕೋಟಿ ರೂ.ಗಳಿಗೂ ವಂಚನೆಯಾಗಿದೆ. ಸಿಬಿಐಗೆ ಒಪ್ಪಿಸುವುದಾಗಿ ಸದನದಲ್ಲಿ ಹೇಳಲಾಗಿದೆ. ವಶಿಷ್ಟ ಬ್ಯಾಂಕ್ ಅವ್ಯವಹಾರ ಸಿಬಿಐಗೆ ವಹಿಸುವುದಾಗಿ ಹೇಳಿದ್ದಾರೆ. ಬ್ಯಾಂಕ್ ಆರಂಭಿಸದೇ ಹಣ ಸಂಗ್ರಹಿಸಿದ್ದಾರೆ. ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
40 ಜನರು ನಮ್ಮ ಮನೆಗೆ ಬಂದಿದ್ದರು. ಸಭೆ ಮಾಡಿದ್ದೇವೆ. 75 ಲಕ್ಷ ರೂ.ಗಳನ್ನು ಬ್ಯಾಂಕ್ ಇಟ್ಟಿದ್ದು ರಕ್ಷಣಾ ಖಾತೆಯ ಸಿಬ್ಬಂದಿ. ಔಷಧಕ್ಕೂ ಗತಿಯಿಲ್ಲ. ನಿವೃತ್ತರಾದವರು ಹಣ ಇಟ್ಟವರು. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ವಿಚಾರದಲ್ಲಿ ಬೆಂಗಳೂರಿನಲ್ಲಿ ನನ್ನೊಂದಿಗೆ ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಭೇಟಿ ಮಾಡಿದ್ದೇವೆ. ಅವರು ಭರವಸೆ ಕೊಟ್ಟರೂ ಆ ಪ್ರಮಾಣದಲ್ಲಿ ನಡೆಯುತ್ತಿಲ್ಲ. ನಮ್ಮ ಭಾಗದವರಿಗೂ ಅನ್ಯಾಯ ಆಗಿದೆ. ಸಾವಿರಕ್ಕೂ ಹೆಚ್ಚಿನ ಜನರು ಇದ್ದದ್ದು ನೋವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತಮ್ಮ ಆಸ್ತಿ ಇತ್ಯಾದಿ ಹರಾಜು ಮಾಡಿದರೆ ಶೇಕಡಾ 70ರಷ್ಟು ಹಣ ಬರುತ್ತದೆ. ನಂಜುಂಡಪ್ಪ ಕಚೇರಿಯ ಕಾರು ಜಪ್ತು ಮಾಡುತ್ತಾರೆ. ಆದಾಗ್ಯೂ, ಅತನ ಹೆಸರಿನ ಕಾರು ಜಪ್ತಿ ಮಾಡುತ್ತಿಲ್ಲ. 155 ಶಾಖೆಗಳಿವೆ. ಕೂಡಲೇ ಈ ಕುರಿತು ಸಿಬಿಐ ತನಿಖೆ ಕೈಗೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗಪ್ಪ ಪಾಂಚಾಳ್, ಡಾ. ಮುರಲೀಧರರಾವ್, ವಿಜಯಕುಮಾರ್ ಟಿ.ಎಸ್., ಸಫದಾರ್ ಶೇಖ್, ಸಂಗಮೇಶ್ ಗುಬ್ಬೇವಾಡ್, ರಮೇಶ್ ಮುಂತಾದವರು ಉಪಸ್ಥಿತರಿದ್ದರು.