ಕಣ್ಮನ ಸೆಳೆಯುತ್ತಿರುವ ಶ್ರೀ ಖಾಸ್ಗತೇಶ್ವರ ಮಠ!

ಜಿ.ಪಿ. ಘೋರ್ಪಡೆ

ತಾಳಿಕೋಟೆ:ಜೂ.28: ಸರ್ವಧರ್ಮ ಸರ್ವ ಜಾತಿಗಳನ್ನು ಸಂಪನ್ನ ಮಾಡಿ ಏಕತೆ ಮೂಡಿಸುವ ರಾಜ್ಯದ ವಿವಿಧ ಮಠಮಾನ್ಯಗಳಲ್ಲೊಂದಾದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠ ಜಾತ್ರೋತ್ಸವ ಅಂಗವಾಗಿ ಬಣ್ಣ ಬಣ್ಣದ ವಿದ್ಯುತ್ ದ್ವೀಪಗಳಿಂದ ಅಲಂಕೃತಗೊಂಡಿದ್ದು ಆಗಮಿಸುವ ಭಕ್ತಾಧಿಗಳ ನೋಡುಗರ ಕಣ್ಮನ ಸೇಳೆಯುತ್ತಿದೆ.

ಜಿಲ್ಲೆಯಲ್ಲಿಯೇ ವಿವಿಧ ಮಠಮಾನ್ಯಗಳಲ್ಲಿಯೇ ಪ್ರಮುಖ ಮಠವಾಗಿರುವ ಶ್ರೀ ಖಾಸ್ಗತೇಶ್ವರ ಮಠ ರಾಜ್ಯದ ವಿವಿಧ ಮಠಮಾನ್ಯಗಳಲ್ಲಿಯೇ ಮಹತ್ವದ ವಿರಕ್ತ ಪರಂಪರೆಯನ್ನು ಹೊಂದಿದ ಮಠವಾಗಿದೆ. ದಿನನಿತ್ಯ ಶ್ರೀಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳ ಬೇಡಿಕೆ ಇಡೇರಿಸುವ ಆಧ್ಯಾತ್ಮೀಕ ಸ್ಥಳವಾಗಿದೆ.

ಜಾತ್ರೋತ್ಸವ ನಿಮಿತ್ಯ ಈಗಾಗಲೇ ಪ್ರಾರಂಭಗೊಂಡಿರುವ ಸಪ್ತಭಜನೆಯಲ್ಲಿ 160ಕ್ಕೂ ಹೆಚ್ಚು ಗ್ರಾಮಗಳ ಭಕ್ತಾಧಿಗಳು ದಿನನಿತ್ಯ ತಂಡೋಪತಂಡವಾಗಿ ಟ್ರಾಕ್ಟರ್, ಇನ್ನಿತರ ವಾಹನಗಳಲ್ಲಿ ಮತ್ತು ಗ್ರಾಮಗಳ ಭಕ್ತಾಧಿಗಳು ಪಾದಯಾತ್ರೆಯ ಮೂಲಕ ಓಂ ನಮಃ ಶಿವಾಯ ಎಂಬ ನಾಮಾಂಕಿತದ ಭಜನೆ ಮಾಡುತ್ತಾ ಸಾಲು ಸಾಲಾಗಿ ಬಂದು ಸಪ್ತ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

9 ದಿನಗಳವರೆಗೆ ಜರುಗಲಿರುವ ಸಪ್ತಭಜನಾ ಕಾರ್ಯಕ್ರಮದಲ್ಲಿ 1 ಗಂಟೆಗೆ ಒಂದು ಗ್ರಾಮದ ಭಕ್ತಸಮೂಹಕ್ಕೆ ಮಾತ್ರ ಪಾಲ್ಗೊಳ್ಳುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇಡೀ ಹಗಲು ರಾತ್ರಿ ನಡೆಯುವ ಶಿವ ಭಜನೆಯಲ್ಲಿ ಸರ್ವಜಾತಿಯ ಜನಾಂಗದವರು ಪಾಲ್ಗೊಳ್ಳುತ್ತಾ ಸಾಗಿರುವದು ಏಕತೆ ಮಂತ್ರ ಪಠಿಸುವ ಸ್ಥಾನವಾಗಿಯೇ ಪರಿಣಮಿಸಿದೆ.

ಜಾತ್ರೋತ್ಸವಕ್ಕೆ ಮುಂಬೈ, ಪುಣೆ, ಗೋವಾ, ಬೆಂಗಳೂರ, ಹೈದ್ಯಾಬಾದ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧಡೆಯಿಂದ ಆಗಮಿಸಿದ ಭಕ್ತಾಧಿಗಳಿಗೆ ವಸತಿ ಹಾಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಈ ಮೊದಲು ಇದ್ದ ಖಾಸ್ಗತೇಶವರ ಮಠವು ಜಿರ್ಣೋದ್ದಾರಗೊಳ್ಳುತ್ತಾ ತನ್ನದೇಯಾದ ಇತಿಹಾಸ ಸಾರುತ್ತಿದೆ. ತಂಪಾದ ವಾತಾವರಣ, ಪ್ರಶಾಂತವಾದ ಜಾಗೆಯಲ್ಲಿ ಭಕ್ತರು ಕುಳಿತುಕೊಂಡು ತಮ್ಮ ಬೇಕು ಬೇಡಿಕೆಗಳನ್ನು ಖಾಸ್ಗತನಿಗೆ ಅರ್ಪಿಸಿ ಶ್ರೀಮಠದ ಹಿಂದಿನ ಪೀಠಾಧಿಪತಿ ಲಿಂ.ವಿರಕ್ತಶ್ರೀಗಳ ದಾರಿಯಲ್ಲಿ ಸಾಗಿರುವ ಈಗೀನ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಮಹಾ ಸ್ವಾಮಿಗಳಿಂದ ಆಶಿರ್ವಾದ ಪಡೆಯುತ್ತಿದ್ದಾರೆ.

ಶ್ರೀಮಠಕ್ಕೆ ಭಕ್ತರೊಬ್ಬರು ನೂತನವಾಗಿ ಗೋಪೂರವನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಗೋಪೂರವು ಇದೊಂದು ಐತಿಹಾಸಿಕ ಪ್ರೇಕ್ಷಣೆಯ ಸ್ಥಳವೆಂಬುದನ್ನು ಎತ್ತಿ ತೋರಿಸುತ್ತಿದೆ. ಶ್ರೀಮಠಕ್ಕೆ ಕೂಡಿಸಲಾದ ಬೃಹತ್ ಆಕಾರದ ದ್ವಾರಬಾಗಿಲು ಭಕ್ತರ ಕಣ್ಮನ ಸೇಳೆಯುತ್ತಿದೆ ದ್ವಾರಬಾಗಿಲಿನ ಹೊಸ್ತಿಲಿನ ಮೇಲೆ ಆಮೆ ಮೂರ್ತಿಯ ಕೆತ್ತನೆ ಮಾಡಲಾಗಿದೆ. ಮತ್ತು ದ್ವಾರಬಾಗಿಲಿನ ಮೇಲೆ ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮೂರ್ತಿಯ ಕೆತ್ತನೆಯನ್ನೂ ಮಾಡಲಾಗಿದೆ.

ತಾಳಿಕೋಟೆಯ ಖಾಸ್ಗತೇಶ್ವರ ಮಠವು ಈಗಾಗಲೇ ಮುದ್ದೇಬಿಹಾಳ, ಅಮಲ್ಯಾಳ, ಕಲ್ಲದೇವನಹಳ್ಳಿ, ಬ್ಯಾಕೋಡ, ಗ್ರಾಮಗಳನ್ನೋಳಗೊಂಡು ವಿವಿಧ ಭಕ್ತರ ಬೇಡಿಕೆಯಂತೆ ಶಾಖಾ ಮಠಗಳನ್ನು ಹೊಂದಿದೆ. ಶ್ರೀಮಠದ ತುಂಬೆಲ್ಲಾ ವಿದ್ಯುತ್ ದ್ವಿಪಗಳ ಅಲಂಕಾರ ಹಾಗೂ ವಿವಿಧ ನಮೂನೆಯ ಟೈಲ್ಸ್‍ಗಳು ನೋಡುಗರ ಕಣ್ಮನ ಸೇಳೆಯುತ್ತಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ತಾಳಿಕೋಟೆ ಪಟ್ಟಣವೆಲ್ಲಾ ವಿದ್ಯುತ್ ದ್ವಿಪಗಳಿಂದ ಗಂಗೊಳಿಸುತ್ತಿರುವದರಿಂದ ಹಬ್ಬದ ವಾತಾವರಣದಂತೆ ನಿರ್ಮಾಣವಾಗಿದ್ದು ಜಾತ್ರಾ ಉತ್ಸವಕ್ಕೆ ಸ್ವಾಗತ ಕೋರುವ ಕಮಾನ್‍ಗಳು, ಪ್ಲೇಕ್ಸ್‍ಗಳು ಎಲ್ಲಡೆ ರಾರಾಜಿಸುತ್ತಿವೆ.

ಗೋಪಾಲ ಕಾವಲಿ :- ಜಾತ್ರಾ ಮಹೋತ್ಸವದಲ್ಲಿ ಗೋಪಾಲ ಕಾವಲಿ(ಮೊಸರುಗಡಿಗೆ) ಒಡೆಯುವ ಕಾರ್ಯಕ್ರಮ ಜೂನ 30 ರಂದು ನಸುಕಿನ ಜಾವ 5-30 ಗಂಟೆಗೆ ಜರುಗುತ್ತಿದ್ದು ಈ ಉತ್ಸವದಲ್ಲಿ ಅಸಂಖ್ಯಾತ ಭಕ್ತಸಮೂಹ ಪಾಲ್ಗೊಳ್ಳುವದು ವಿಶೇಷ. ಈ ಗೋಪಾಲ ಕಾವಲಿ ವಿಶೇಷವೆಂದರೆ ಪಂಡರಪುರ ವಿಠ್ಠಲನ ಜಾತ್ರೋತ್ಸವದಂದು ಜರುಗುವ ಗೋಪಾಲ ಕಾವಲಿಗೂ ಈ ಮಠದಲ್ಲಿ ಜರುಗುವ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮಕ್ಕೂ ಸಂಬಂದವಿದೆ ಎಂಬ ಮಾತು ಹಿರಿಯರದ್ದಾಗಿದೆ.

ಈ ಮೊಸರು ಗಡಿಗೆ ಒಡೆತದಿಂದ ಬೇರ್ಪಟ್ಟು ಬಿಳ್ಳುವ ಮೊಸರು ಕೆಳಗೆ ನಿಂತ ಭಕ್ತಾರ ಮೇಲೆ ಬಿದ್ದರೆ ಶ್ರೀ ಖಾಸ್ಗತನಿಗೆ ತಮ್ಮ ಭಕ್ತಿಯ ಬೇಡಿಕೆ ಮುಟ್ಟುತ್ತದೆ ಎಂಬುದು ಹಾಗೂ ಆ ಭಕ್ತರ ಮನೆಯಲ್ಲಿ ಹಾಲು ಜೇನುನಿನ ಹಾಗೆ ಸಂಪತ್ಭರಿತವಾಗಿತ್ತದೆ ಎಂಬುದು ಭಕ್ತರ ನಂಬಿಕೆ.

ಆನೆ ಅಂಬಾರಿ ಮೆರವಣಿಗೆ :- ಜೂಲೈ 1 ರಂದು ರಥೋತ್ಸವ ಅಂಗವಾಗಿ ಜರುಗುವ ಗಂಗಸ್ಥಳ ಕಾರ್ಯಕ್ರಮದಲ್ಲಿ ಆನೆ ಅಂಬಾರಿ ಮೇಲೆ ಶ್ರೀ ಖಾಸ್ಗತಶ್ರೀಗಳ ಬೆಳ್ಳಿ ಮೂರ್ತಿಯ ಹಾಗೂ ಅಶ್ವಮೇದ ರಥದಲ್ಲಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ವಿವಿಧ ವಾದ್ಯವೈಭವಗಳು ಹಿಂದಿನ ರಾಜ್ಯ ವೈಭವವನ್ನು ಮರುಕಳಿಸಿದಂತೆ ಕಾಣುತ್ತದೆ. ಮೆರವಣಿಗೆಯಲ್ಲಿ ವಿಶೇಷವಾಗಿ ಯುವಕರು, ಹಿರಿಯರು, ಮಹಿಳೆಯರು, ಒಳಗೊಂಡು ಸುತ್ತಮುತ್ತಲಿನ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾ ಸಾಗುವದು ವಿಶೇಷ. ಅಂದೇ ಸಾಯಂಕಾಲ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ.


ಜಾತ್ರಾ ಮಹೋತ್ಸವಕ್ಕೆ ಸಂಬಂದಿಸಿ ಎಲ್ಲರೀತಿಯಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ರಾಜ್ಯದ ವಿವಿಧ ಕಡೆಗಳಲ್ಲಿ ಉತ್ಸವ ಕುರಿತು ಪ್ರಚಾರ ಕೈಗೊಳ್ಳಲಾಗಿದೆ ಲಕ್ಷಾಂತರ ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು ನಿತ್ಯ ಪ್ರಸಾದದ ವ್ಯವಸ್ಥೆ ನಡೆಯುತ್ತಿದ್ದು ಜಾತ್ರೋತ್ಸವ ದಿನದಂದೂ ಕೂಡಾ ಅನೇಕ ಭಕ್ತಾಧಿಗಳು ಶ್ರೀಮಠದ ಆಶ್ರಯದಲ್ಲಿ ವಿವಿಧಡೆ ಪ್ರಸಾದದ ವ್ಯವಸ್ಥೆ ಕೈಗೊಳ್ಳಲಿದ್ದಾರೆ.

ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು

ಶ್ರೀ ಖಾಸ್ಗತ ಮಠ ತಾಳಿಕೋಟೆ