ಕಣ್ಣು ಬೇನೆ ಕುರಿತು ಜಾಗೃತಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.3: ಮದ್ರಾಸ್ ಕಣ್ಣು ಬೇನೆಗೆ ತುತ್ತಾದವರು ಚಿಕಿತ್ಸೆ ಪಡೆದು ಮತ್ತೊಬ್ಬರಿಗೆ ಹರಡದಂತೆ ಜಾಗೃತಿ ವಹಿಸಬೇಕು ಎಂದು ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಕೆ.ಶ್ರೀಕಾಂತ ತಿಳಿಸಿದರು.
ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮದ್ರಾಸ್ ಐ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಸಾಕಷ್ಟು ಜನರು ಕಣ್ಣು ಬೇನೆಯಿಂದ ಬಳಲುತ್ತಿದ್ದಾರೆ. ಸೋಂಕಿತ ವಿದ್ಯಾರ್ಥಿಗಳು ಶಾಲೆ, ಹಾಸ್ಟೆಲ್‍ಗಳಿಂದ ದೂರ ಉಳಿದು, ಸಂಪೂರ್ಣ ಗುಣಮುಖವಾದ ಮೇಲೆ ಶಾಲೆಗೆ ಹೋಗಬೇಕು.
ಪದೇ ಪದೇ ಕಣ್ಣುಗಳನ್ನು ಉಜ್ಜದೇ ಬಟ್ಟೆಯಿಂದ ರಕ್ಷಿಸಿಕೊಂಡು ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಕಣ್ಣು ಕೆಂಪಾಗಿ ಉರಿ ಬರುವುದು ಹಾಗೂ ತುರಿಕೆ ಮತ್ತು ಕಣ್ಣಲ್ಲಿ ನೀರು ಬರುವುದು ಸೋಂಕಿನ ಲಕ್ಷಣಗಳಾಗಿವೆ. ಸೋಂಕು ಕಾಣಿಸಿಕೊಂಡಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು. ಮುಖ್ಯ ಶಿಕ್ಷಕ ಲಿಂಗಪ್ಪ ಹಾಗೂ ಶಿಕ್ಷಕರು ಇದ್ದರು.