ಕಣ್ಣು, ಕಿವಿ ಸಂಪೂರ್ಣ ಬಂದ್: ಡಿಕೆಶಿ

ಬೆಂಗಳೂರು, ಜ. 5- ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡುವ ಯಾವುದೇ ಆರೋಪಕ್ಕೆ ಪ್ರತಿಕ್ರಿಯಿಸುವುದಿಲ್ಲ ಅವರ ವಿಷಯದಲ್ಲಿ ತಾವು ಸಂಪೂರ್ಣವಾಗಿ ಕಣ್ಣು-ಕಿವಿ ಮಾಡಿಕೊಂಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕುಮಾರಸ್ವಾಮಿ ಅವರು ತಮ್ಮ ಬಗ್ಗೆ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ಬಗ್ಗೆ ಆಗಲಿ ಏನು ಬೇಕಾದರೂ ಹೇಳಿಕೊಳ್ಳಲು ತಾವು ಪ್ರತಿಕ್ರಿಯೆ ನೀಡುವುದಿಲ್ಲ ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಶಾಸಕರು, ಮುಖಂಡರು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ನಂಬಿ ಬಂದರೆ ಸ್ವಾಗತ; ನಾವು ಯಾರನ್ನೂ ಬನ್ನಿ ಎಂದು ಕರೆಯುವುದಿಲ್ಲ; ಅವರಾಗಿಯೇ ಬಂದರೆ ಸ್ವಾಗತಿಸುತ್ತೇವೆ ಎಂದರು.

ಪಕ್ಷ ಬಿಡುವುದಿಲ್ಲ:

ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಪಕ್ಷ ತೊರೆಯುವುದಿಲ್ಲ; ಈ ಸಂಬಂಧ ಅವರೊಂದಿಗೆ ಚರ್ಚೆ ನಡೆಸಿದ್ದೇನೆ; ಕೆಲ ಸಣ್ಣಪುಟ್ಟ ಸಮಸ್ಯೆಗಳನ್ನು ಪಕ್ಷದ ಮಟ್ಟದಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದರು.

ನಾಳೆಯಿಂದ ಹೋರಾಟ:

2021 ವರ್ಷವನ್ನು ಕಾಂಗ್ರೆಸ್ ಪಕ್ಷ ಹೋರಾಟ ಮತ್ತು ಸಂಘಟನೆಯ ವರ್ಷವೆಂದು ಘೋಷಿಸಿದೆ; ಅದರಂತೆ ನಾಳೆಯಿಂದ ಹೋರಾಟದ ಸಭೆಗಳು ಆರಂಭವಾಗಲಿವೆ ಎಂದು ಹೇಳಿದ್ದಾರೆ.

ನಾಳೆ ಮೈಸೂರು ವಿಭಾಗದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ನಾಯಕರ ಸಭೆಯನ್ನು ಮಂಗಳೂರಿನಲ್ಲಿ ಕರೆಯಲಾಗಿದೆ; ದಿನಪೂರ ಪಕ್ಷ ಸಂಘಟನೆ ಸೇರಿದಂತೆ ಸ್ಥಳೀಯ ಸಮಸ್ಯೆಗಳ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ಸಂಬಂಧ ಚರ್ಚೆ ನಡೆಸಲಾಗುವುದು ಎಂದರು.

ಜನವರಿ 8ರಂದು ಬೆಂಗಳೂರು ವಿಭಾಗದ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ; ಬೆಳಗಾವಿ ವಿಭಾಗದ ಸಭೆ ಜನವರಿ 11ರಂದು ಹುಬ್ಬಳ್ಳಿ – ಧಾರವಾಡದಲ್ಲಿ ನಡೆಯಲಿದೆ; ಗುಲ್ಬರ್ಗ ವಿಭಾಗದ ಪಕ್ಷದ ಮುಖಂಡರು, ನಾಯಕರ ಸಭೆ ಜನವರಿ 18ರಂದು ಗುಲ್ಬರ್ಗದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ಆಯಾ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ಸಂಘಟಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಂಪೂರ್ಣ ವಿಫಲ:

ಕೊರೋನಾ ಸೋಂಕು ವಿಷಯವನ್ನು ರಾಜ್ಯದಲ್ಲಿ ಎದುರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಲಾಕ್ ಡೌನ್, ಸೀಲ್ ಡೌನ್ ನಿಂದ ಇಡೀ ರಾಜ್ಯಾದ್ಯಂತ ಆರ್ಥಿಕತೆ ಕುಸಿದಿದೆ; ಇಂತಹ ಸಂದರ್ಭದಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ತಜ್ಞರ ಸಲಹೆ ಪಡೆದು ಮುಂದುವರಿಯಬೇಕೇ ಹೊರತು ಏಕಾಏಕಿ ನಿರ್ಧಾರ ಕೈಗೊಳ್ಳಬಾರದು ಎಂದರು.