ಕಣ್ಣುಗಳನ್ನು ಸಂರಕ್ಷಣೆ ಮಾಡಿಕೊಳ್ಳದಿದ್ದರೇ ನಮ್ಮ ಜೀವನವೇ ಕತ್ತಲು

ಹಿರಿಯೂರು.ಏ.೨: ಇಂದು ನಾವು ಕಣ್ಣುಗಳಿದ್ದರೇ ಮಾತ್ರ ನೋಡಲು ಸಾಧ್ಯ. ಕಣ್ಣು ದೃಷ್ಣಿ ಇಲ್ಲದಿದ್ದರೇ ನಾವು ಬದುಕಿದ್ದು ವ್ಯರ್ಥ. ಕಣ್ಣುಗಳನ್ನು ಸಂರಕ್ಷಣೆ ಮಾಡಿಕೊಳ್ಳದಿದ್ದರೇ ನಮ್ಮ ಜೀವನವೇ ಕತ್ತಲು ಎಂದು ಆಂಜನೇಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ ಹೇಳಿದರು. ಅವರು ತಾಲೂಕಿನ ರಂಗೇನಹಳ್ಳಿ ಸಮೀಪದ ಶಿಡ್ಲಯ್ಯನಕೋಟೆ ಗ್ರಾಮದಲ್ಲಿ ದೃಷ್ಠಿ ಕಣ್ಣಿನ ಆಸ್ಪತ್ರೆ, ಜನಪ್ರಭುತ್ವ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರಾ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಜನಪ್ರಭುತ್ವ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಮುಖ್ಯಸ್ಥ ಎ.ಕಾಡಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂದು ವೃದ್ಧರಿಗೆ ಹೆಚ್ಚು ಕಣ್ಣಿನ ದೋಷಗಳು ಇದ್ದು ಅವರು ಅನಾರೋಗ್ಯದಿಂದ ಬಳಲುತ್ತಿರುವುದನ್ನ ಗಮನಿಸಿ ನಮ್ಮ ಸಂಸ್ಥೆಯ ಆಶ್ರಯದಲ್ಲಿ ಇದನ್ನು ಹಮ್ಮಿಕೊಂಡಿದ್ದೇವೆ. ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. ಕರ್ನಾಟಕ ಯುವಜನ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಾಲತೇಶ್ ಅರಸ್ ಮಾತನಾಡಿ, ಇಂದು ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚು ಮೊಬೈಲ್‌ಗೀಳಿಗೆ ಸಿಲುಕಿದ್ದಾರೆ. ಸಮೀಕ್ಷೆಯ ಪ್ರಕಾರ ಕಣ್ಣಿನ ದೋಷಗಳೂ ವಿದ್ಯಾರ್ಥಿಗಳಲ್ಲಿ ಯುವಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಇದು ಅಪಾಯದ ಸೂಚನೆ, ಭವಿಷ್ಯ ಕಟ್ಟಿಕೊಳ್ಳುವವರ ಬದುಕೇ ಕತ್ತಲೆ ಆಗುವುದು ಸರಿಯಲ್ಲ. ಹಾಗಾಗಿ ಎಲ್ಲರೂ ತಪಾಸಣೆ ಮಾಡಿಸಿ ಎಂದರು. ಆಂಜನೇಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ, ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ತಿಪ್ಪಮ್ಮ, ಜನಪ್ರಭುತ್ವ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಮುಖ್ಯಸ್ಥ ಎ. ಕಾಡಪ್ಪ, ಗ್ರಾಮಪಂಚಾಯತಿ ಸದಸ್ಯರಾದ ತ್ಯಾರೇಶ್, ಸದಸ್ಯರಾದ ಸಂಗೇನಹಳ್ಳಿ ಶ್ರೀಧರ್, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎನ್ ತಿಪ್ಪೇಸ್ವಾಮಿ, ಯುವ ಮುಖಂಡ ಸಂಗೇನಹಳ್ಳಿ ಸಿಟ್ಟಲಿಂಗರಾಜು, ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ಜೈಪ್ರಕಾಶ್, ಅಕ್ಷಯ್‌ಕುಮಾರ್, ಎಸ್.ಕೆ ಕುಮಾರ್, ಮಂಜುನಾಥ್, ದೃಷ್ಠಿ ಕಣ್ಣಿನ ಆಸ್ಪತ್ರೆಯ ಶಿವಕುಮಾರ್, ಶಾಲೆಯ ಶಿಕ್ಷಕ ವರ್ಗದವರು ಇದ್ದರು.  ಇದೇ ಸಂದರ್ಭದಲ್ಲಿ ಸಂಗೇನಹಳ್ಳಿ, ಶಿಡ್ಲಯ್ಯನಕೋಟೆ ಭಾಗದ ಮಹಿಳೆಯರೂ ಸೇರಿದಂತೆ ನೂರಾರು ವೃದ್ಧರಿಗೆ ಉಚಿತ ನೇತ್ರಾ ತಪಾಸಣೆ ಮಾಡಲಾಯಿತು.