
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೭: ಅಮೆರಿಕಾದ ಮ್ಯಾಕ್ ನಾಬ್ ಫ್ಯೂನರಲ್ ಹೋಮ್ 301 ಫ್ರೆಡೆರಿಕ್ ರಸ್ತೆ, ಕ್ಯಾಟೊನ್ಸ್ವಿಲ್ಲೆ, MD 21228ನಲ್ಲಿ ಆತ್ಮಹತ್ಯೆಗೆ ಶರಣಾದ ದಾವಣಗೆರೆ ಜಿಲ್ಲೆ ಜಗಳೂರು ಮೂಲದ ಮೂವರ ಅಂತ್ಯಕ್ರಿಯೆಯು ಮಧ್ಯರಾತ್ರಿ 12 ಗಂಟೆಯ ಹೊತ್ತಿಗೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತದೇಹಗಳನ್ನು ಸುಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.ಶನಿವಾರ ರಾತ್ರಿ 11.30ಕ್ಕೆ ಆರಂಭವಾದ ಅಂತ್ಯಕ್ರಿಯೆ ಅಂತಿಮ ವಿಧಿವಿಧಾನವು 12 ಗಂಟೆಯ ಸುಮಾರಿಗೆ ಭಾರತೀಯ ಕಾಲಮಾನದ ಪ್ರಕಾರ ನೆರವೇರಿತು. ಪೂಜೆ ಪುನಸ್ಕಾರ ನೆರವೇರಿಸಿ ಸುಮಾರು 80 ಜನರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ಕಣ್ಣೀರ ಕೋಡಿಯಲ್ಲಿ ಎಂಜಿನಿಯರ್ ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ, ಯಶ್ ಹೊನ್ನಾಳ ಅವರ ಮೃತದೇಹಗಳನ್ನು ನೋಡುತ್ತಲೇ ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್ ಹಾಗೂ ಪ್ರತಿಭಾ ಹೊನ್ನಾಳರ ತಾಯಿ ಪ್ರೇಮಾ ಹಾಗೂ ಸಹೋದರ ಗಣೇಶ್ ಗಳಗಳ ಅತ್ತರು. ಮುಖ ನೋಡುತ್ತಿದ್ದಂತೆಯೇ ವಿಧಿಯಾಟಕ್ಕೆ ಹಿಡಿಶಾಪ ಹಾಕಿದರು. ಮುದ್ದಾದ ಕುಟುಂಬವು ಈ ಲೋಕ ಬಿಟ್ಟು ತಣ್ಣಗೆ ಮಲಗಿರುವುದನ್ನು ನೋಡಿ ಕಣ್ಣೀರು ಸುರಿಸುತ್ತಾ ಅಳು ತಡೆಯಲಾಗದೇ ಬಿಕ್ಕಿ ಬಿಕ್ಕಿ ಅತ್ತರು. ಶೋಭಾ ಹೊನ್ನಾಳ ಹಾಗೂ ಪ್ರೇಮಾ ಅವರಂತೂ ಗೋಳಾಡಿದರು. ಪುತ್ರನನ್ನು ಕಳೆದುಕೊಂಡ ಶೋಭಾ ಅವರು ಮಗ, ಸೊಸೆ, ಮೊಮ್ಮಗ ಇನ್ನು ಇಲ್ಲವಲ್ಲಾ ಎಂದು ಕಣ್ಣೀರು ಸುರಿಸಿದರು. ಪ್ರೇಮಾ ಅವರು ತನ್ನ ಪುತ್ರಿ, ಅಳಿಯ, ಮೊಮ್ಮಗನ ದುರಂತ ಸಾವಿಗೆ ಕಂಬನಿ ಮಿಡಿದರು. ಯೋಗೇಶ್ ಹೊನ್ನಾಳ ತನ್ನ ಪತ್ನಿ ಪ್ರತಿಭಾ ಹೊನ್ನಾಳ ಹಾಗೂ ಯಶ್ ಹೊನ್ನಾಳನಿಗೆ ಶೂಟ್ ಮಾಡಿ ಆ ಬಳಿಕ ತಾನೂ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿರುವುದು ಬಹುತೇಕ ಖಚಿತವಾಗಿದೆ. ಯೋಗೇಶ್ ಹೊನ್ನಾಳ ತಾಯಿ ಶೋಭಾ ಹಾಗೂ ಪ್ರತಿಭಾ ಹೊನ್ನಾಳ ತಾಯಿ ಪ್ರೇಮಾ ಅವರಿಗೆ ಡೆತ್ ನೋಟ್ ನಲ್ಲಿ ಏನಿದೆ ಎಂಬ ಬಗ್ಗೆ ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ಕೌಂಟಿ ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಆಗಸ್ಟ್ 15ರಂದು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹೊನ್ನಾಳ ಗ್ರಾಮದ ಯೋಗೇಶ್ ಅವರು ಪತ್ನಿ ಪ್ರತಿಭಾ ಹೊನ್ನಾಳ ಹಾಗೂ ಪುತ್ರ ಯಶ್ ಹೊನ್ನಾಳನಿಗೆ ಶೂಟ್ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ದಿನಗಳ ಬಳಿಕ ಬೆಳಕಿಗೆ ಬಂದಿತ್ತು.ಯೋಗೇಶ್ ಹೊನ್ನಾಳ ತಾಯಿ ಶೋಭಾ, ಸಹೋದರ ಹಾಗೂ ಪ್ರತಿಭಾ ಯೋಗೇಶ್ ಹೊನ್ನಾಳ ತಾಯಿ ಹಾಗೂ ಸಹೋದರ ಅಮೆರಿಕಾದಲ್ಲಿದ್ದು, ಸೆಪ್ಟಂಬರ್ 2 ಕ್ಕೆ ದಾವಣಗೆರೆಗೆ ಬರುವ ಸಾಧ್ಯತೆ ಇದೆ. ಆ ಬಳಿಕವೇ ಡೆತ್ ನೋಟ್ ಸೀಕ್ರೆಟ್ ಬಯಲಾಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಮೆರಿಕಾದಲ್ಲಿನ ಕಾನೂನಿನ ಪ್ರಕಾರವೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತದೇಹಗಳನ್ನು ಅಮೆರಿಕಾದಿಂದ ದಾವಣಗೆರೆಗೆ ತೆಗೆದುಕೊಂಡು ಬರುವ ಸ್ಥಿತಿಯಲ್ಲಿ ಇಲ್ಲದ ಕಾರಣ ಅಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿತ್ತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಮೃತದೇಹಗಳಿಗೆ ಅಂತಿಮ ಪೂಜೆ ನೆರವೇರಿಸಿ, ವಿಧಿವಿಧಾನ ನೆರವೇರಿಸಲಾಯಿತು. ಎರಡೂ ಕುಟುಂಬಗಳು ಅಮೆರಿಕಾ ಕಾಲಮಾನದ ಪ್ರಕಾರ ಸಂಜೆ 2ರಿಂದ 4ಗಂಟೆಯವರೆಗೆ ಸುಮಾರಿಗೆ IAD ಗೆ ಆಗಮಿಸಿದರು. ಸೋಮವಾರಕ್ಕಿಂತ ಶನಿವಾರದಂದು ಅಂತ್ಯಕ್ರಿಯೆಯ ಸೇವೆ ನಿರ್ವಹಿಸಲು ಅಮೆರಿಕಾ ಪೊಲೀಸರು ಎಲ್ಲಾ ರೀತಿಯ ಅನುವುಮಾಡಿಕೊಟ್ಟಿದ್ದರು. ಸ್ನೇಹಿತರು ಹಾಗೂ ನೆರೆಹೊರೆಯವರು ಹಾಜರಾಗಿದ್ದರು. ಅಮೆರಿಕಾದಲ್ಲಿ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಈ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳು ದೃಢಪಡಿಸಿವೆ.