ರಾಯಚೂರು,ಜೂ.೨೯-ಬೆಲೆ ಏರಿಕೆ ಮೂಲಕ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಸ್ಥಾನವನ್ನು ಇದೀಗ ಕೆಂಪು ಟಮೋಟೋ ಅತಿಕ್ರಮಿಸುವ ಮೂಲಕ ಗ್ರಾಹಕರ ಕಣ್ಣಲ್ಲಿ ನೀರು ಬರಿಸುವುದರೊಂದಿಗೆ ಜೇಬಿಗೆ ಕತ್ತರಿ ಪ್ರಯೋಗ ನಡೆಸಿದೆ.
ಕೆಲ ಜಿಲ್ಲೆ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಟಮೋಟೋ ಬೆಳೆಯ ದಾಸ್ತಾನು ಸಹ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಟಮೋಟೋ ಕೊಳ್ಳುವ ಗ್ರಾಹಕರ ಜೇಬಿಗೆ ಟಮೋಟೋ ಬೆಲೆ ಬಿಸಿ ಸುಡುತ್ತಿದೆ.
ದಿನನಿತ್ಯದ ಅಡಿಗೆಗೆ ಟಮೋಟೋ ಅತ್ಯವಶ್ಯಕ ತರಕಾರಿಯಾಗಿದ್ದು, ತರಕಾರಿ ಇಲ್ಲದಿದ್ದರೆ ಅಡುಗೆ ರುಚಿಸುವುದು ಇಲ್ಲ ಮಹಿಳೆಯರಿಗೆ ಹಾಗಾಗಿ ಟಮೋಟೋ ಬೇಡಿಕೆ ಹೆಚ್ಚಾಗಿದ್ದರೂ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ದಾಸ್ತಾನು ಲಭ್ಯವಿಲ್ಲದಿರುವುದು ಟಮೋಟೋ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಕೆಲ ದಕ್ಷಿಣ ರಾಜ್ಯದ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಟಮೋಟೋ ಬೆಳೆಯುವ ಪ್ರದೇಶಗಳಲ್ಲಿ ಮುಂಗಾರು ಕೊರತೆ ಹಿನ್ನೆಲೆ ನೀರಿನ ಸಮಸ್ಯೆ ಉಲ್ಬಣಿಸಿದೆ. ಇನ್ನು ಉತ್ತರ ಭಾಗದ ರಾಜ್ಯಗಳಲ್ಲಿ ಬಿಪರ್‌ಜೋಯ್ ಚಂಡಮಾರುತ ಪರಿಣಾಮ ಟಮೋಟೋ ಬೆಳೆ ನಾಶಗೊಂಡಿದ್ದು, ಸರಬರಾಜು ಕಡಿತಗೊಂಡಿದೆ.
೫ ರೂನಿಂದ ೧೦ ನಂತರ ೪೦, ೮೦ ಅಂತಿಮವಾಗಿ ಪ್ರತಿ ಕೆಜಿ ಟಮೋಟೋ ಬೆಲೆ ನೂರು ದಾಟಿರುವುದು ಕೊಳ್ಳುವವರ ಮೇಲೆ ತೀವ್ರ ಪರಿಣಾಮ ಬೀರಿದೆ. ಇಷ್ಟಕ್ಕೆ ಟಮೋಟೋ ಬೆಲೆ ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ. ಈ ಬೆಲೆ ಏರಿಕೆ ಮಾರುಕಟ್ಟೆಗೆ ಟಮೋಟೋ ದಾಸ್ತಾನು ಹೆಚ್ಚಳವಾಗುವವರೆಗೂ ಬೆಲೆ ಬಿಸಿ ಗ್ರಾಹಕರನ್ನು ಸುಡುತ್ತಲೇ ಇರುತ್ತದೆ. ಉಳಿದಂತೆ ಇತರೆ ತರಕಾರಿಗಳ ಬೆಲೆ ಸಹ ಏರಿಕೆಯಾಗುತ್ತಿದ್ದು, ತರಕಾರಿ ಖರೀದಿಸಬೇಕೇ ಬೇಡವೇ ಎಂಬ ಪರಿಸ್ಥಿತಿಯಲ್ಲಿ ಗ್ರಾಹಕರಿದ್ದಾರೆ. ಲಭ್ಯವಿರುವ ಪ್ರದೇಶಗಳಿಂದ ಟಮೋಟೋ ದಾಸ್ತಾನನ್ನು ರಾಜ್ಯಕ್ಕೆ ತರಿಸಿಕೊಳ್ಳುವ ಮೂಲಕ ಸರ್ಕಾರ ಟಮೋಟೋ ಬೆಲೆ ನಿಯಂತ್ರಿಸಬೇಕಾಗಿದೆ ಹಾಗೂ ಟಮೋಟೋ ಪ್ರತಿ ಗ್ರಾಹಕರು ಕೊಂಡುಕೊಳ್ಳಬಹುದಾದ ಪರಿಸ್ಥಿತಿ ನಿರ್ಮಾಣ ಮಾಡಬೇಕಿದೆ ಎಂದು ಟಮೋಟೋ ಖರೀದಿಸಿ ಬೆಚ್ಚಿಬಿದ್ದ ಗ್ರಾಹಕರು ಒತ್ತಾಯಿಸಿದ್ದಾರೆ.