ಕಣ್ಣೀರಿಡಲು ಸರ್ಕಾರದ ಅನುಮತಿ ಕೇಳಬೇಕೇ: ಚಕ್ರವರ್ತಿ ಸೂಲಿಬೆಲೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.19:- ಹತ್ಯೆಯಾದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಅವರಿಗೆ ಸಂತಾಪ ಸೂಚಿಸಲು ಸಭೆ ನಡೆಸಲು ನಿರ್ಧರಿಸಿದ್ದೆವು.ಆದರೆ, ಸರ್ಕಾರ ಬೇಕೆಂತಲೇ ಅನುಮತಿ ನೀಡಲಿಲ್ಲ.ಮಡಿದವರಿಗೆ ಕಣ್ಣೀರು ಹಾಕಲು ಸರ್ಕಾರದ ಅನುಮತಿ ಕೇಳಬೇಕೇ ಎಂದು
ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ವೀರಾಂಜನೇಯ ಧರ್ಮ ಜಾಗೃತಿ ಸಮಿತಿಯು ಆಯೋಜಿಸಿದ್ದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.ನಮ್ಮ ಜನರಿಗೆ ಶ್ರದ್ದಾಂಜಲಿ ಸಲ್ಲಿಸಲು ಸರ್ಕಾರ ನಮಗೆ ಅನುಮತಿ ನೀಡಲ್ಲ,ನಮಗಾಗಿ ಮಡಿದವರಿಗೆ ಕಣ್ಣೀರು ಹಾಕಲು ಸರ್ಕಾರದಿಂದ ಅನುಮತಿ ಸಿಗದೆ ನ್ಯಾಯಾಲಯದ ಮೊರೆಹೋಗಿ ಅನುಮತಿ ತರಬೇಕಾದ ಪರಿಸ್ಥಿತಿ ಬಂದಿದೆ.ಇದು ದುರಾಡಳಿತದ ಪರಮಾವಧಿ,ಸ್ವಾತಂತ್ರ್ಯ ಹರಣ.ನಾವು ನಮ್ಮ ದೇಶದಲ್ಲಿದ್ದೇವೋ ಬೇರೆ ದೇಶದಲ್ಲಿ ಇದ್ದೇವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ ಎಂದರು.
ಸರ್ಕಾರ ಅಧಿಕಾರದ ಅಮಲಿನಲ್ಲಿ ಅಧಿಕಾರಿಗಳ ಮುಖೇನ ನಮ್ಮನ್ನು ಬೆದರಿಸುವ ಕೆಲಸ ಮಾಡುತ್ತಿದೆ.ವೇಣುಗೋಪಾಲ್ ಗೆ ಸಂತಾಪ ಸೂಚಿಸಲು ಅನುಮತಿ ನಿರಾಕರಿಸಲಾಯಿತು.ನಾನು ಕೋರ್ಟ್ ಗೆ ಮನವಿ ಸಲ್ಲಿಸಿ ಸಂತಾಪ ಸಭೆ ನಡೆಸಲು ಅನುಮತಿ ತಂದಿದ್ದೇವೆ.ಹಿಂದೂ ರಾಜ್ಯದಲ್ಲಿ ಹಿಂದೂಗಳು ಸ್ವಾತಂತ್ರ್ಯ ಇಲ್ಲದೆ ಬದುಕು ನಡೆಸಬೇಕೇ ಎಂದು ಪ್ರಶ್ನಿಸಿದರು.
ಹನುಮ ಜಯಂತಿ ನಿಲ್ಲಕೂಡದು. ಮುಂದಿನ ವರ್ಷವೂ ಮತ್ತಷ್ಟು ಅದ್ದೂರಿಯಾಗಿ ನಡೆಸಬೇಕು.ವೇಣುಗೋಪಾಲ್ ಹನುಮ ಜಯಂತಿಗೆ ದೀಪ ಹಚ್ಚಿದ್ದಾನೆ, ನಾವು ದೀಪಕ್ಕೆ ತೈಲ ಹಾಕುವ ಮುಖೇನ ಹನುಮ ಜಯಂತಿಯನ್ನು ಪ್ರತಿವರ್ಷವೂ ಅದ್ದೂರಿಯಾಗಿ ಆಚರಿಸುವಂತಾಗಬೇಕು. ಆಗ ಮಾತ್ರ ವೇಣುಗೋಪಾಲ್ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ,ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ನಡೆಸಿದ ವೇಣುಗೋಪಾಲ್ ನನ್ನು ಕಳೆದುಕೊಂಡಿರುವುದಕ್ಕೆ ದುಃಖ ಆಗಿದೆ.ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸರಣಿ ಕೊಲೆಗಳು ನಡೆಯುತ್ತಿವೆ.ಕಾನೂನು ವಿರೋಧಿ ಚಟುವಟಿಕೆಯನ್ನು ಬೆಂಬಲಿಸಲು ಸರ್ಕಾರ ಸನ್ನದ್ಧವಾಗಿದೆ.ನಾವು ಭಾರತದಲ್ಲಿದ್ದೇವೆಯೇ ಅಥವ ತಾಲಿಬಾನ್ ನಲ್ಲಿ ಇದ್ದೇವೆಯೇ ಎಂಬ ಗಾಬರಿ ಹುಟ್ಟಿಕೊಳ್ಳುತ್ತದೆ ಎಂದರು.
ವೇಣುಗೋಪಾಲ್ ದೇಶದ್ರೋಹಿಯೇ, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಸಾರಿದ್ದನೇ.ಒಬ್ಬ ಹಿಂದೂ ಕಾರ್ಯಕರ್ತನಿಗೆ ಸಂತಾಪ ಸೂಚಿಸಲು ಅನುಮತಿ ನೀಡದ ಸರ್ಕಾರಕ್ಕೆ ನಾಚಿಕೆ ಆಗಬೇಕು.ಕೇಸರಿ ಶಾಲು,ತಿಲಕ ಹಾಕಿಕೊಳ್ಳದಂತೆ ತಡೆಹಿಡಿಯಲು ಸರ್ಕಾರ ಪರೋಕ್ಷವಾಗಿ ಷಡ್ಯಂತ್ರ ನಡೆಸುತ್ತಿದೆ.ಇದು ಹಿಂದೂ ಧರ್ಮದ ಸಂಕೇತ.ರಾಮಭೂಮಿಯಲ್ಲಿ ಹುಟ್ಟಿದವರು ಕೇಸರಿ ಶಾಲು,ತಿಲಕ ಹಾಕಿಯೇ ತೀರುತ್ತೇವೆ.ಹಿಂದೂ ಧರ್ಮ ಆಚರಣೆ ಉಳಿದಿರುವುದು ದಲಿತ, ಹಿಂದುಳಿದ ವರ್ಗ ಮತ್ತು ಬಡವರ ಮನೆಗಳಲ್ಲಿ ಮಾತ್ರ.ಹಾಗಾಗಿ ಹಿಂದೂ ಧರ್ಮ ಬಿಂಬಿತ ಮಹಾಭಾರತ, ರಾಮಾಯಣ ಬರೆಯಲು ವೇದವ್ಯಾಸ,ವಾಲ್ಮೀಕಿ ಹುಟ್ಟಿಕೊಂಡರು.ಅಲ್ಲದೆ ದೇಶಕ್ಕೆ ಕಾನೂನು ಸುಭದ್ರತೆ ನೀಡಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಬರಬೇಕಾಯಿತು.ದಲಿತ, ಹಿಂದುಳಿದ ವರ್ಗದ ಜನ ಈ ದೇಶದ ಬೆನ್ನೆಲುಬು ಎಂದರು.
ವೇಣುಗೋಪಾಲ್ ಪತ್ನಿ ಪೂರ್ಣಿಮಾ ಮಾತನಾಡಿ, ನನ್ನಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ.ಹನುಮ ಜಯಂತಿ ಮಾಡಿದ ಎಂಬ ಒಂದೇ ಕಾರಣಕ್ಕೆ ನನ್ನ ಪತಿಯನ್ನು ಕೊಂದು ಹಾಕಿದ್ದಾರೆ. ರಾಜ್ಯದಲ್ಲಿ ಧರ್ಮಾಚರಣೆ ಮಾಡಿದ್ದು ದೊಡ್ಡ ತಪ್ಪೇ.ಇಂತಹ ದುರ್ಗತಿ ಬೇರೆ ಯಾವ ಹಿಂದೂ ವ್ಯಕ್ತಿಗಳಿಗೆ ಬರಬಾರದು.ಹಾಗಾಗಿ ನನ್ನ ಗಂಡನನ್ನು ಕೊಂದ ಆರೋಪಿಗಳಿಗೆ ಕೋರ್ಟ್ ಕಠಿಣ ಶಿಕ್ಷೆ ನೀಡುವ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಬೇಕು.ಆಗಮಾತ್ರ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂದರು.
ಸಭೆಯಲ್ಲಿ ಮೈಸೂರು ಮಹಾನಗರಪಾಲಿಕೆ ಮೇಯರ್ ಶಿವಕುಮಾರ್, ಶಾಸಕ ಶ್ರೀ ವತ್ಸವ ಮಾಜಿ ಶಾಸಕ ಹರ್ಷವರ್ಧನ್, ಮಾಜಿ ವಿಧಾನಪರಿಷತ್ ಸದಸ್ಯ ಸಿದ್ದರಾಜು, ಬಿಜೆಪಿ ಜಿಲ್ಲಾ ಅಧ್ಯಕ್ಷೆ ಮಂಗಳಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಕೆ.ಸಿ. ಲೋಕೇಶ,ಟೌನ್ ಅಧ್ಯಕ್ಷ ಕಿರಣ್, ಮುಖಂಡರಾದ ಕರೋಹಟ್ಟಿ ಮಹದೇವಯ್ಯ, ಪ್ರಕಾಶ್,ಕೊತ್ತೇಗಾಲ ಕಿಟ್ಟಿ, ಅರಕಲವಾಡಿ ನಾಗೇಂದ್ರ, ಮೂಗೂರು ಅರವಿಂದ ಇತರರು ಹಾಜರಿದ್ದರು.