ಕಣ್ಣಿನ ರಕ್ಷಣೆಗೆ ಕಾಳಜಿ ಅಗತ್ಯ : ದೀಕ್ಷಿತ


ಧಾರವಾಡ,ನ.5- ಬೆಳಗಿನಿಂದ ರಾತ್ರಿ ನಿದ್ರೆಗೆ ಜಾರುವವರೆಗೆ ಬಿಡುವಿಲ್ಲದೇ ಕೆಲಸಮಾಡುವ ಕಣ್ಣಿನ ರಕ್ಷಣೆಗೆ ಎಲ್ಲರೂ ಕಾಳಜಿವಹಿಸುವ ಅಗತ್ಯವಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಸಂಜೀವಿನಿ ಕಣ್ಣಿನ ಆಸ್ಪತ್ರೆಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ದೀಕ್ಷಿತ ಹೇಳಿದರು.
ಅವರು ಇಲ್ಲಿಯ ಮಾಳಮಡ್ಡಿ-ಎಮ್ಮಿಕೇರಿ ಬಳಿ ಬರುವ ವಿಶ್ವ ಹಿಂದೂ ಪರಿಷತ್ತಿನ ಸಂಜೀವಿನಿ ಕಣ್ಣಿನ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಲಾದ ನೇತ್ರ ಪರೀಕ್ಷಾ ಯಂತ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಹದಲ್ಲಿ ಅತ್ಯಂತ ಸೂಕ್ಷ್ಮ ಅಂಗವಾದ ನೇತ್ರವನ್ನು ನಿರಂತರ ಆರೋಗ್ಯ ಪೂರ್ಣವಾಗಿ ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಆಸಕ್ತಿ ಹೊಂದಬೇಕು ಎಂದರು.
ಹಿರಿಯ ನೇತ್ರ ತಜ್ಞ ಡಾ. ಎ.ಎಸ್. ಯರಗುಪ್ಪಿ ಮಾತನಾಡಿ, ಕಣ್ಣು ಪ್ರತಿಯೊಂದೂ ಜೀವಿಯ ಬಹು ಮುಖ್ಯ ಅಂಗ. ಅದರಲ್ಲೂ ಮನುಷ್ಯನ ಕಣ್ಣುಗಳು ಅವನ ಆಯುಷ್ಯದುದ್ದಕ್ಕೂ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆÉ. ನೇತ್ರ ರಕ್ಷಣೆಯ ವಿಚಾರದಲ್ಲಿ ಯಾರೂ ಅಲಕ್ಷತೆ ವಹಿಸಬಾರದು. ಕಣ್ಣಿನ ತೊಂದರೆಗಳಿಗೆ ತಾವೇ ತಮ್ಮ ತಿಳಿವಳಿಕೆಯಂತೆ ಮನೆ ಮದ್ದುಗಳನ್ನು ಮಾಡಿ ದೃಷ್ಟಿಯನ್ನು ಕಳೆದುಕೊಳ್ಳಬಾರದು. ಕಣ್ಣಿನ ಯಾವುದೇ ತೊಂದರೆಯನ್ನೂ ಅಲಕ್ಷ್ಯ ಮಾಡದೇ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಔಷಧೋಪಚಾರದ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಯಾವುದೋ ಕಾರಣಕ್ಕೆ ಒಂದು ಬಾರಿ ದೃಷ್ಟಿಹೀನವಾದರೆ ಬದುಕಿನುದ್ದಕ್ಕೂ ಶಾಶ್ವತವಾಗಿ ಅಂಧತ್ವವನ್ನೇ ಅನುಭವಿಸಬೇಕಾಗುತ್ತದೆ ಎಂದರು.
ಜಿಲ್ಲಾ ಭಜರಂಗ ದಳದ ಅಧ್ಯಕ್ಷ ಶಿವಾನಂದ ಸತ್ತಿಗೇರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿನಾಯಕ ಭಟ್, ಮೀನಾಕ್ಷಿ ಫಡಕೆ ಇದ್ದರು.