ಕಣಗಳ ಪಹಣಿ, ನಿವೇಶನ ಪಟ್ಟ ನೀಡುವಂತೆ ಆಗ್ರಹ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:sಸೆ.16 ಪಟ್ಟಣದ ಪುರಸಭೆ ವ್ಯಾಪ್ತಿಯ ಎಂ.ಬಿ.ಕಾಲೂನಿಯಲ್ಲಿ, ಸರ್ಕಾರದ ಭೂಮಿಯನ್ನು ಅಳತೆ ಮಾಡಲು ಹೋಗಿದ್ದ ಸರ್ವೆ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದು ನಮ್ಮ ಬೇಡಿಕೆ ಈಡೇರದೆ ಅಳತೆಗೆ ಬಿಡುವುದಿಲ್ಲವೆಂದು ಹಿಂದಕ್ಕೆ ಕಳಿಸಿದ ಘಟನೆ ಬುಧವಾರ ಜರುಗಿತು.
 ತುಂಗಭದ್ರ ಡ್ಯಾಂ ನಿರ್ಮಾಣದ ಕಾಮಗಾರಿ ಆರಂಭವಾದಾಗ, ತಾಲೂಕಿನ ಮುತ್ಕೂರು, ಬೆನಕಾಪುರ ಗ್ರಾಮಗಳು ಹಿನ್ನೀರಿನಲ್ಲಿ ಮುಳುಗಡೆಯಾದ ಪರಿಣಾಮ ಅಂದು ಸ್ಥಳಾಂತರಗೊಂಡು, ಈ ಎಂ.ಬಿ.ಕಾಲೂನಿ(ಮುತ್ಕೂರು-ಬೆನಕಾಪುರ)ಎಂದು ಮರು ನಾಮಕಾರಣಮಾಡಿ ಬಂದು ನೆಲಸಿದರು. ಸರ್ಕಾರದ ಮುಳುಗಡೆಗೊಂಡ ಪ್ರದೇಶದ ನಿವಾಸಿ ರೈತರಿಗೆ ಪರಿಹಾರವಾಗಿ ಇಲ್ಲಿ ತಲಾ 5ಎಕರೆ ಕೃಷಿ ಭೂಮಿ, ಕಣಗಳು ಹಾಗೂ ನಿವೇಶನಗಳನ್ನು ನೀಡಿದ್ದರು. ರೈತರು ಹೊಸ ಜೀವನವನ್ನು ಕಟ್ಟಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ಕಣಗಳಿಗೆ ಪಹಣಿನೀಡಿ, ನಿವೇಶನಗಳಿಗೆ ಪಟ್ಟನೀಡಿ ಎಂದು ಆಗಮಿಸಿದ ತಹಸೀಲ್ದಾರ್‍ಗಳಿಗೆ, ಅಂದಿನ ಗ್ರಾ.ಪಂ.ಆಡಳಿತಗಳಿಗೆ ಮನವಿಪತ್ರಗಳನ್ನು ನೀಡುತ್ತಲೇ ಬಂದರು. ಯಾವುದನ್ನು ಕಿವಿಗೆ ಹಾಕಿಕೊಳ್ಳದ ಅಧಿಕಾರಿಗಳು ಇಂದು ಸರ್ಕಾರಿ ಭೂಮಿಯನ್ನು ಸರ್ವೆಮಾಡಬೇಕು ಎಂದು ಬಂದವರನ್ನು ಗ್ರಾಮಸ್ಥರು ತಡೆದ ಘಟನೆ ಜರುಗಿತು.
ಗ್ರಾಮಸ್ಥರ ಪರವಾಗಿ ಬಿ.ಎಂ.ವಾಮದೇವಯ್ಯ, ಮಲ್ಲಿಕಾರ್ಜುನ, ಕರಿಯಪ್ಪ ಮತ್ತು ಶಂಕ್ರಪ್ಪ ಮಾತನಾಡಿ, ನಾವು ಇಲ್ಲಿ ಸುಮಾರು 60ವರ್ಷಗಳಿಗೂ ಹೆಚ್ಚುಕಾಲ ನಮ್ಮ ಹಿರಿಯರೊಂದಿಗೆ ವಾಸವಾಗಿದ್ದೇವೆ. ನಮಗೆ ಸರ್ಕಾರ ನೀಡಿದ ನಿವೇಶನ ಮತ್ತು ಕಣಗಳ ಪಟ್ಟ, ಪಹಣಿ ನೀಡದೆ, ಅಕ್ರಮ ಸಕ್ರಮಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸದೇ, ಈಗ ಏಕಾಏಕಿ ಸರ್ಕಾರಿ ಭೂಮಿ ಅಳತೆ ಮಾಡಲು ಪೊಲೀಸರೊಂದಿಗೆ ಸರ್ವೆ ಅಧಿಕಾರಿಗಳು ಬಂದಿದ್ದಾರೆ. ನಾವು ಕಣಗಳಿಗೆ ಪಹಣಿ ಮತ್ತು ನಿವೇಶನಗಳಿಗೆ ಪಟ್ಟ ನೀಡದೆ ಅಳತೆ ಮಾಡಲು ಬಿಡುವುದಿಲ್ಲ ಎಂದರು. ಆಗ ಅಧಿಕಾರಿಗಳ ನಡುವೆ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದಗಳು ಜರುಗಿದವು. ಪೊಲೀಸರ ಮಧ್ಯೆ ಪ್ರವೇಶಿಸಿ ಸಾರ್ವಜನಿಕರನ್ನು ಸಮಾಧಾನ ಪಡಿಸಲು ಮುಂದಾದರು.
ಕೆಲಕಾಲ ವಾಗ್ವಾದದ ಬಳಿಕ ಆರ್.ಐ. ಸಾಲ್ಮನಿ ಕೊಟ್ರೇಶ ಮಧ್ಯೆ ಆಗಮಿಸಿ, ನಿಮಗೆ ನಿವೇಶನಗಳು ಮತ್ತು ಕಣಗಳನ್ನು ಗುರುತಿಸಲು ಅವಕಾಶಮಾಡಿಕೊಡಿ, ನಂತರ ಉಳಿದ ಸರ್ಕಾರಿ ನಿವೇಶನವನ್ನು ಅಳತೆಮಾಡಿಕೊಳ್ಳುತ್ತೇವೆ ಎಂದು ಸಮಾಧಾನ ಪಡಿಸಿದರು. ಬಳಿಕ ಗ್ರಾಮಸ್ಥರು ಒಂದು ತೀರ್ಮಾನಕ್ಕೆ ಬಂದು, ಗ್ರಾಮದ ನಿವಾಸಿಗಳು ಒಂದು ಚರ್ಚೆಮಾಡಿಕೊಂಡು, ಒಂದು ದಿನಾಂಕ ನಿಗಧಿಮಾಡುತ್ತೇವೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು ಅಲ್ಲಿಂದ ತೆರಳಿದ ಘಟನೆ ಜರುಗಿತು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಎಡಿಎಲ್‍ಆರ್ ಬಸವರಾಜ್ ರೋಣದ್, ತಾಲೂಕು ಸರ್ವೆಯರ್ ರಮೇಶ, ಗ್ರಾಮಲೆಕ್ಕಾಧಿಕಾರಿ ನೇತ್ರಾವತಿ, ಎಎಸ್‍ಐ ಕಲ್ಲಪ್ಪ, ಗೋವಿಂದಪ್ಪ ಎಸ್.ಜಯಪ್ಪ, ಕೋರಿ ದುರುಗಪ್ಪ, ನಾಗಪ್ಪ, ಕೊಟ್ರೇಶ್, ಹುಗ್ಗಿ ಹನುಮಂತಪ್ಪ, ಬಸವರಾಜ್, ಚನ್ನವೀರಸ್ವಾಮಿ, ದೇವೆಂದ್ರಪ್ಪ, ಕೆ.ಮಂಜುನಾಥ, ಎಚ್.ವಿಕ್ರಮ್, ಮಂಜಪ್ಪ, ಎಸ್.ನಿಂಗಪ್ಪ, ವಸಂತಕುಮಾರ್ ಸೇರಿ ನೂರಾರು ಜನರು ಇದ್ದರು.