ಕಡ್ಡಿರಾಂಪುರದಲ್ಲಿ ಗ್ರಾಮ ವಾಸ್ತವ್ಯ : 139 ಅಹವಾಲು ಸಲ್ಲಿಕೆ

ಹೊಸಪೇಟೆ ಮಾ21: ತಹಶೀಲ್ದಾರ್ ಎಚ್. ವಿಶ್ವನಾಥ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತಾಲೂಕಿನ ಕಡ್ಡಿರಾಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶನಿವಾರ ನಡೆಸಿದ ಗ್ರಾಮ ವಾಸ್ತವ್ಯ ದಲ್ಲಿ 139 ಅಹವಾಲುಗಳು ಸಲ್ಲಿಕೆಯಾಗಿವೆ. .
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಯೋಜನೆಯ ಗ್ರಾಮವಾಸ್ತವ್ಯ ಕಾರ್ಯಕ್ರಮದ ನಿಮಿತ್ತ ತಹಸೀಲ್ದಾರ್ ಎಚ್. ವಿಶ್ವನಾಥ ಕಡ್ಡಿರಾಂಪುರ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕಲಿಕಾ ಕ್ರಮವನ್ನು ತಹಸೀಲ್ದಾರ್ ಪರಿಶೀಲಿಸಿದರು. ಮತದಾರ ಪಟ್ಟಿ ಪರಿಷ್ಕರಣೆ, ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡುವುದು, ಗುಡಿಸಲು ರಹಿತ ವಾಸದ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು. ಗ್ರಾಮದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸೇರಿ ಇತರೆ ಕಾಡು ಪ್ರಾಣಿಗಳ ಹಾವಳಿ ತಗಟ್ಟುವುದು. ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಸೇರಿ ಗ್ರಾಮದ ಮೂಲಭೂತ ಸೌಕರ್ಯಗಳ ಸಮರ್ಪಕವಾಗಿ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಿವೇಶನ, ಮನೆಗಳು, ಜಮೀನುಗಳ ಪಹಣಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಗ್ರಾಮದ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ನೀಡಬೇಕು. ಸ್ಮಶಾನಕ್ಕೆ ಜಾಗ ನಿಗದಿಪಡಿಸುವುದು, ಆಶ್ರಯ ಯೋಜನೆಗೆ ಜಮೀನನ್ನು ಕಾಯ್ದಿರಿಸಬೇಕು. ಸರಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸಬೇಕು. ಅಂಗನವಾಡಿ, ಸಮುದಾಯ ಭವನಕ್ಕೆ ಜಾಗ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ವಿಧವಾ ವೇತನ, ಮಾಸಾಶನ ಸೇರಿ 139 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸ್ಥಳದಲ್ಲೇ 81 ಅರ್ಜಿಗಳನ್ನು ತಹಸೀಲ್ದಾರ್ ವಿಲೇವಾರಿ ಮಾಡಿದರು. ಉಳಿದ ಅರ್ಜಿಗಳನ್ನು ಹಂತ ಹಂತವಾಗಿ ವಿಲೇ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ತಾಪಂ ಮುಖ್ಯಾಧಿಕಾರಿ ವಿಶ್ವನಾಥ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತಕುಮಾರ, ಉಪ ತಹಸೀಲ್ದಾರ್ ಅಮರನಾಥ, ಕಂದಾಯ ನಿರೀಕ್ಷಕ ಅನಿಲಕುಮಾರ, ವಿಎ ರವಿಚಂದ್ರ ಗೊಗ್ಗಿ, ಬಿಸಿಎಂ ಅಧಿಕಾರಿ ನಡುವಿನಮನಿ, ಪಿಡಿಒ ರಾಜೇಶ್ವರಿ, ತಾಪಂ ಸದಸ್ಯ ಪಾಲಪ್ಪ, ಗ್ರಾಪಂ ಸದಸ್ಯರು ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಗ್ರಾಮವಾಸ್ಥವ್ಯದಲ್ಲಿ ಪಾಲ್ಗೊಂಡಿದ್ದರು.