ಕಡ್ಡಾಯ ಶಿಕ್ಷಣ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಪೂರಕ

ಕಲಬುರಗಿ,ಜೂ.12: ಪಾಲಕ-ಪೋಷಕ ವರ್ಗದವರು ಯಾವುದೇ ಸಂದರ್ಭದಲ್ಲಿಯೂ ತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸುವುದು ಬೇಡ. ಅವರಿಗೆ ಶಿಕ್ಷಣ, ತರಬೇತಿ, ಸಂಸ್ಕಾರ ನೀಡಿ ದೇಶದ ಸದೃಢ ಮಾನವ ಸಂಪನ್ಮೂಲವನ್ನಾಗಿಸಬೇಕು. ಕಡ್ಡಾಯವಾಗಿ ಎಲ್ಲರು ಶಿಕ್ಷಣ ಪಡೆದರೆ ಜನಜಾಗೃತಿ ಉಂಟಾಗಿ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯಾಗಲು ಪೂರಕವಾಗುತ್ತದೆ ಎಂದು ಪ್ರಾಚಾರ್ಯ ಮಹಮ್ಮದ್ ಅಲ್ಲಾಉದ್ದೀನ್ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಸೋಮವಾರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ಯಲ್ಲಿ ಬಾಲ ಕಾರ್ಮಿಕ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಬಾಲ ಕಾರ್ಮಿಕ ಪದ್ದತಿಯು ಮಕ್ಕಳ ಬೆಳವಣಿಗೆಗೆ ಮಾರಕವಾಗಿದ್ದು, ಅದರ ನಿರ್ಮೂಲನೆಗೆ ಸಂವಿಧಾನ, ಸರ್ಕಾರಗಳು ಅನೇಕ ಕಾಯ್ದೆ-ಕಾನೂನುಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ನಿರ್ಮೂಲನೆ ಮಾಡಲು ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ಪಾಲಕ-ಪೋಷಕ, ಉದ್ಯೋಗದಾತರ ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ರೇಣುಕಾ ಚಿಕ್ಕಮೇಟಿ, ಸಮೀನಾ ಬೇಗಂ, ಪ್ರ.ದ.ಸ ನೇಸರ ಎಂ.ಬೀಳಗಿಮಠ, ಪಾಲಕ ಪ್ರತಿನಿಧಿ ಶಂಕರ ಸಿಂಗೆ, ವಿದ್ಯಾರ್ಥಿಗಳು, ಮತ್ತಿತರರಿದ್ದರು.