ಕಡ್ಡಾಯ ಲಸಿಕೆ ಪಡೆಯಲು ಸೂಚನೆ: ರಾಮನಗೌಡ


ಹುಬ್ಬಳ್ಳಿ,ನ.30: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಶೇಕಡಾ100ರಷ್ಟು ಸಿಬ್ಬಂದಿ ಒಂದು ಡೋಸ್ ಹಾಗೂ ಶೇಕಡಾ 50ರಷ್ಟು ಸಿಬ್ಬಂದಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಇನ್ನುಳಿದವರು ಆದ್ಯತೆಯ ಮೇಲೆ ಕಡ್ಡಾಯವಾಗಿ ಎರಡನೇ ಡೋಸ್ ಲಸಿಕೆ ಪಡೆಯುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ತಜ್ಞ ವೈದ್ಯರ ಪ್ರಕಾರ ಸಂಭಾವ್ಯ ಮೂರನೆ ಅಲೆ ಅತ್ಯಂತ ಅಪಾಯಕಾರಿಯಾಗಿದೆ. ಸಾರಿಗೆ ನೌಕರರು ಅದರಲ್ಲೂ ಮುಖ್ಯವಾಗಿ ಚಾಲಕರು, ನಿರ್ವಾಹಕರು ಮತ್ತು ಬಸ್ ನಿಲ್ದಾಣಗಳ ಸಾರಿಗೆ ನಿಯಂತ್ರಕರು ಕೆಲಸ ನಿರ್ವಹಿಸುವಾಗ ನಿತ್ಯವೂ ವಿವಿಧ ಸ್ಥರದ ಸಾವಿರಾರು ಜನರೊಂದಿಗೆ ನೇರ ಸಂಪರ್ಕಕ್ಕೆ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನಗಳ ಪ್ರಕಾರ ಸುರಕ್ಷತೆಯ ದೃಷ್ಟಿಯಿಂದ ಸಂಸ್ಥೆಯ ಸಿಬ್ಬಂದಿಗಳಿಗೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಒಟ್ಟು 2032 ನೌಕರರಿದ್ದಾರೆ. ಅವರಲ್ಲಿ 1448 ಚಾಲಕರು- ನಿರ್ವಾಹಕರುಗಳಿದ್ದಾರೆ.ಶೇಕಡಾ 100ರಷ್ಟು ಸಿಬ್ಬಂದಿ ಈಗಾಗಲೆ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಅವರ ಪೈಕಿ 1018 ಸಿಬ್ಬಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನುಳಿದವರು ಕೂಡಲೆ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ನಿರ್ದೇಶನಗಳ ಪ್ರಕಾರ ಕೋವಿಡ್ ನಿಯಮಾವಳಿಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಾರ್ವಜನಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.