
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.6 :- ಧಾರ್ಮಿಕವಾಗಿ ಹಬ್ಬಗಳನ್ನು ಆಚರಿಸುವಂತೆ ಈಗಾಗಲೇ ನಿಗಧಿಯಾಗಿರುವ ಮೇ 10ರಂದು ಜರುಗುವ ಮತದಾನ ದಿನದಂದು ಪ್ರಜಾಪ್ರಭುತ್ವದ ಬಲಿಷ್ಠತೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಚುನಾವಣಾ ಹಬ್ಬವನ್ನು ಆಚರಿಸುವಂತೆ ವಿಜಯನಗರ ಜಿಲ್ಲಾ ಮುಖ್ಯ ಯೋಜನಾಧಿಕಾರಿ ಅನ್ನದಾನಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೂಡ್ಲಿಗಿ ಪಟ್ಟಣದಲ್ಲಿ ಕಳೆದ ಸಂಜೆ ಜರುಗಿದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವಿಜಯನಗರ, ಜಿಲ್ಲಾ ಸ್ವೀಪ್ ಸಮಿತಿ ವಿಜಯನಗರ ಹಾಗೂ ತಾಲೂಕು ಪಂಚಾಯತ್ ಕೂಡ್ಲಿಗಿ ಇವರ ಸಹಯೋಗದ ಯುವ ಮತದಾರರ ನೊಂದಣಿ ಹಾಗೂ ಮತದಾರರ ಜಾಗೃತಿ ಜಾಥಾದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡುತ್ತ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಗೆ ಸಂಬಂಧಿಸಿದಂತೆ 101 ಮತಗಟ್ಟೆಗಳಲ್ಲಿ ಶೇ 72ಕ್ಕಿಂತ ಕಡಿಮೆ ಮತದಾನವಾಗಿದ್ದು ಈ ಬಾರಿ ಕ್ಷೇತ್ರದಲ್ಲಿ ಜಾಗೃತಿ ಜಾಥಾ ನಡೆಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾರರ ಮಹತ್ವ ಹಾಗೂ ಎಂತಹ ವ್ಯಕ್ತಿಗಳನ್ನು ಆಯ್ಕೆಮಾಡಬೇಕೆಂಬ ನಿರ್ಧಾರವನ್ನು ನಾವು ಚಲಾಯಿಸುವ ಮತದಾನದಿಂದ ಸಾಧ್ಯವಾಗಿದ್ದು ಪ್ರಜಾಪ್ರಭುತ್ವದ ಬಲಿಷ್ಠತೆಗೆ ಪ್ರತಿಯೊಬ್ಬ ಮತದಾರರು ಯಾವುದೇ ಹಣ ಹಾಗೂ ಇತರೆ ಆಮಿಷಕ್ಕೆ ಒಳಗಾಗದೆ ಮುಕ್ತವಾಗಿ ದೈರ್ಯದಿಂದ ಮತಚಲಾಯಿಸಿ ದೇಶದ ಅಭಿವೃದ್ಧಿ ಹಾಗೂ ಕ್ಷೇತ್ರದ ಅಭಿವೃದ್ಧಿಯ ಜನನಾಯಕರ ಆಯ್ಕೆ ಮಾಡುವಂತೆ ಈ ಬಾರಿ ಶೇ 100ರಷ್ಟು ಮತಚಲಾಯಿಸಿ ಪ್ರಜಾಪ್ರಭುತ್ವದ ಘನತೆ ಎತ್ತಿಹಿಡಿಯುವಂತೆ ಮತದಾರರಲ್ಲಿ ಮನವಿ ಮಾಡಿದರು ಹಾಗೂ ಈ ಬಾರಿ ಚುನಾವಣಾ ಆಯೋಗ ನಿರ್ಧರಿಸಿದಂತೆ 80ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ವಿಶೇಷಚೇತನರಿಗೆ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗದೇ ಇದ್ದಲ್ಲಿ ಅಂತವರು ಚುನಾವಣೆ ಅಧಿಕಾರಿಗಳಿಗೆ ಮನವಿ ನೀಡಿದರೆ ಮನೆಗೆ ಬಂದು ಮತ ಚಲಾವಣೆ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಚುನಾವಣಾ ಸ್ವೀಪ್ ಸಮಿತಿ ತಾಲೂಕು ಅಧ್ಯಕ್ಷ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ ಮಾತನಾಡಿ ಕಡ್ಡಾಯವಾಗಿ ಮತದಾನ ಮಾಡಲು ಮತದಾರರಿಗೆ ಪ್ರೇರಣೆಯಾಗಲು ಸೈಕಲ್ ಜಾಥಾ, ವಿಶೇಷಚೇತನರಿಂದ ಬೈಕ್ ರ್ಯಾಲಿ, ವಸತಿ ಶಾಲಾ ಮಕ್ಕಳಿಂದ ಮತದಾನ ಮಾಡುವ ಕುರಿತು ಕಡ್ಡಾಯ ಮತದಾನಕ್ಕೆ ಪಾಲಕರಿಗೊಂದು ಪತ್ರ, ಹಾಗೂ ಪಂಜಿನ ಮೆರವಣಿಗೆ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಜಾಥಾ ನಡೆಸಲಾಗುತ್ತಿದ್ದು ತಪ್ಪದೆ ಪ್ರತಿ ಮತದಾರರು ಮತಚಲಾಯಿಸಿ ಎಂದು ತಿಳಿಸಿದ ಅವರು 2004ರಲ್ಲಿ ಕ್ಷೇತ್ರದಲ್ಲಿ 1388 ಮಕ್ಕಳು ಜನಿಸಿದ್ದು ಕೇವಲ ಶೇ 50ರಷ್ಟು ಯುವ ಮತದಾರರ ನೋಂದಣಿಯಾಗಿದ್ದು ಏಪ್ರಿಲ್ 11ರೊಳಗೆ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಶಿಕ್ಷಕರಾದ ಸಿದ್ದರಾಧ್ಯ ಚುನಾವಣಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ವಿಧಾನಸಭಾ ಚುನಾವಣಾಧಿಕಾರಿ ಈರಣ್ಣ ಬಿರಾದಾರ್ , ಉಪ ಚುನಾವಣಾಧಿಕಾರಿ ಹಾಗೂ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ, ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಮತ್ತು ಪಟ್ಟಣ ಪಂಚಾಯತಿ ಕಿರಿಯ ಆರೋಗ್ಯ ನಿರೀಕ್ಷಕಿ ಗೀತಾವಿಜೇತ್ , ತಾಲೂಕು ಸಮಾಜಕಲ್ಯಾಣ ಅಧಿಕಾರಿ ಜಗದೀಶ್ ದಿಗಡೂರ್ , ಕೂಡ್ಲಿಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ ಶಿವರಾಜ್, ಕಾರ್ಯದರ್ಶಿ ನಾಗರಾಜ ಪದಾಧಿಕಾರಿಗಳಾದ ಇಂಜಿನಿಯರ್ ನಾಗನಗೌಡ, ಅಂಜಿನಪ್ಪ, ವೆಂಕಟೇಶ ಸೇರಿದಂತೆ ಇತರರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶುಅಭಿವೃದ್ದಿ ಯೋಜನಾಅಧಿಕಾರಿ ನಾಗನಗೌಡ ಹಾಗೂ ಸಿಬ್ಬಂದಿ, ಆರೋಗ್ಯ ಇಲಾಖೆಯ ಗಿರಿಜಾಅಂಜಿನಪ್ಪ,ಹಾಗೂ ಇತರರು, ಆಶಾಕಾರ್ಯಕರ್ತೆಯರು ಹಾಗೂ ಇತರರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.