
ಬ್ಯಾಡಗಿ,ಏ13 : ಮುಂಬರುವ ಮೇ.10ರಂದು ನಡೆಯುವ ವಿಧಾನಸಭಾ ಚುನಾವಣೆಯ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಕಡ್ಡಾಯವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಸ್.ವಿ.ಮುಳ್ಳಳ್ಳಿ ತಿಳಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಮಾದರಿ ನೀತಿ ಸಂಹಿತೆಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೇ, ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 104808 ಪುರುಷರು, 100837 ಮಹಿಳೆಯರು, ಇತರೆ 6 ಸೇರಿ ಒಟ್ಟು 205651 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 242 ಮತಗಟ್ಟೆಗಳಿದ್ದು, ಅದರಲ್ಲಿ 51ಸೂಕ್ಷ್ಮ, 188ಸಾಮಾನ್ಯ, 3 ವಲ್ಲರೇಬಲ್ ಬೂತ್ ಇವೆ. 2ಎಂಸಿಸಿ ತಂಡ, 3ಎಫ್ ಎಸ್ ಟಿ ತಂಡ, 2 ವಿಡಿಯೋ ತಂಡ, 3 ಎಸ್.ಎಸ್.ಟಿ ತಂಡ, 1ಎಇಓ ತಂಡ ಸೇರಿದಂತೆ 22 ಸೆಕ್ಟರ್ ಆಫೀಸರ್ ನೇಮಕವಾಗಿದ್ದಾರೆಂದು ತಿಳಿಸಿದರು.
ಏ.13 ರಿಂದ 20 ರವೆರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನಾಮಪತ್ರ ಪರಿಶೀಲನೆ ಏ.21 ಹಾಗೂ ನಾಮ ಪತ್ರ ಹಿಂಪಡೆಯಲು ಏ.24 ಕೊನೆಯ ದಿನ ಆಗಿರುತ್ತದೆ ಎಂದರಲ್ಲದೇ, ಪತ್ರಿಕೆ, ಮಾಧ್ಯಮ ಹಾಗೂ ಸೋಶಿಯಲ್ ಮಿಡಿಯಾದವರು ಪೇಡ್ ಮತ್ತು ಫೇಕ್ ನ್ಯೂಸ್ ಮಾಡಬಾರದು. ನೀತಿ ಸಂಹಿತೆ ಉಲ್ಲಂಘಿಸಿದರೆ ನೋಟಿಸ್ ನೀಡಿ ಕ್ರಮ ಜರುಗಿಸಲಾಗುವುದು. ಶೇ.40 ರಷ್ಟು ಅಂಗವಿಕಲತೆ ಹೊಂದಿರುವವರು ಮನೆಯಲ್ಲಿ ಇದ್ದು ಮತದಾನ ಮಾಡಲು ಅವಕಾಶವಿದೆ. ತಾಲೂಕಿನಲ್ಲಿ ಮೋಟೆಬೆನ್ನೂರ ಹಾಗೂ ಕುಮ್ಮೂರು ಕ್ರಾಸ್ ಬಳಿ ಚೆಕ್ ಪೆÇೀಸ್ಟ್ ಮಾಡಲಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ನಗದು ಮತ್ತು ಸರಕು ಸಾಗಾಣಿಕೆ ವ್ಯವಹಾರವನ್ನು ನಡೆಸಬೇಕು. ಇಲ್ಲದಿದ್ದಲ್ಲಿ ಅನಗತ್ಯ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ಎ.ಪ್ರಸಾದ, ಪಿಎಸ್‍ಐ ದೇವರಾಯ ಸೇರಿದಂತೆ ಚುನಾವಣೆ ಸಿಬ್ಬಂದಿ ಉಪಸ್ಥಿತರಿದ್ದರು.