ಕಡ್ಡಾಯವಾಗಿ ಲಸಿಕೆ ಪಡೆಯಿರಿ

ಚಾಮರಾಜನಗರ, ಏ.20- ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ನೌಕರರು ಕಡ್ಡಾಯವಾಗಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶಿಸಿದ್ದಾರೆ.
ಕೋವಿಡ್-19 2ನೇ ಅಲೆಯು ಹರಡುತ್ತಿದ್ದು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್-19 ಸೋಂಕು ನಿಯಂತ್ರಿಸಲು ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಲು ಈಗಾಗಲೇ ನಿರ್ದೇಶನ ನೀಡಲಾಗಿದೆ.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿ, ನೌಕರರು, ಹೊರಗುತ್ತಿಗೆ ನೌಕರರು ಕಡ್ಡಾಯವಾಗಿ ಕೋವಿಡ್-19 ಲಸಿಕೆಯನ್ನು ಪಡೆಯುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶಿಸಿದ್ದಾರೆ.