ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.5 :- ಹೆತ್ತವರ ಯೋಗಕ್ಷೇಮ ವಿಚಾರಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಪ್ಪದೇ ಮತ ಹಾಕಬೇಕು. ಈ ಬಗ್ಗೆ ಉದಾಸೀನ ಮಾಡಬಾರದು ಎಂದು ವಿನಂತಿಸಿ ತಮ್ಮ ಪಾಲಕರಿಗೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪತ್ರ ಬರೆಸುವ ಮೂಲಕ ವಿನೂತನ ಮತದಾನ ಜಾಗೃತಿ ಅಭಿಯಾನ ಮಂಗಳವಾರ ನಡೆಸಲಾಯಿತು.
ತಾಲೂಕಿನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳ ಮೂಲಕ ತಾಲೂಕು ಸ್ವೀಪ್ ಸಮಿತಿಯಿಂದ ಈ ಅಭಿಯಾನ ನಡೆಸಲಾಯಿತು. ಮತದಾನದ ಮಹತ್ವ ಮತ್ತು ಯಾವುದೇ ಆಮಿಷಗಳಿಗೆ ಒಳಗಾಗದೆ ಪಾರದರ್ಶಕವಾಗಿ ಮತದಾನ ಮಾಡುವಂತೆ ಪಾಲಕರಿಗೆ ಪತ್ರ ಬರೆಯುವ ಮೂಲಕ ಮಕ್ಕಳು ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿಗಳು ಬರೆದ ಅಂಚೆ ಪತ್ರಗಳನ್ನು ತಾಲೂಕಿನ ಅಂಚೆ ಪೆಟ್ಟಿಗೆಯಲ್ಲಿ ಹಾಕಲಾಯಿತು. ಈ ಸಂದರ್ಭದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ವೈ.ರವಿಕುಮಾರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಹಾಸ್ಟೆಲ್ ಮೇಲ್ವಿಚಾರಕರು ಇದ್ದರು.