ಕಡ್ಡಾಯವಾಗಿ ಮತ ಚಲಾಯಿಸಿ : ಜಾಗೃತಿ


ಮುಂಡರಗಿ,ಏ.9: ಮತದಾನ ಅಮೂಲ್ಯವಾದುದು. ಸದೃಢ ಆಡಳಿತಕ್ಕೆ ಮತದಾನ ಬಹು ಮುಖ್ಯ. ಹಾಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಬೇಕೆಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ್ ಹನಗಂಡಿ ಹೇಳಿದರು.
ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಷ್ಟಿಕೊಪ್ಪ ಗ್ರಾಮದ ಬಳಿ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮತದಾನದ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದರು.
ಇದೇ ವೇಳೆ ಮಾತನಾಡಿದ ಸಹಾಯಕ ನಿರ್ದೇಶಕರಾದ (ಗ್ರಾ.ಉ) ವಿಶ್ವನಾಥ ಹೊಸಮನಿ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ದೊಡ್ಡ ಕೊಡುಗೆ ಮತದಾನ. ಅದನ್ನು ನೀವು ಹಕ್ಕು ಎಂದು ತಿಳಿಯಬೇಕು. ಆ ಹಕ್ಕಿನಿಂದಲೇ ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭುವಾಗುತ್ತಾನೆ. ನಿಮ್ಮ ಒಂದು ಮತ ದೇಶದ ಸದೃಢ ಬುನಾದಿಗೆ ಕಾರಣವಾಗುತ್ತದೆ. ಹಾಗಾಗಿ ಯಾರೂ ಮತದಾನ ಮಾಡದೆ ನಿರ್ಲಕ್ಷ್ಯ ವಹಿಸಬಾರದು ಎಂದು ಕರೆ ನೀಡಿದರು.
ನರೇಗಾ ಯೋಜನೆ ಬಡವರ ಪಾಲಿಗೆ ಆಶಾಕಿರಣ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ನರೇಗಾ ಯೋಜನೆಯಲ್ಲಿ ಆಧಾರ್ ಜೋಡಣೆ ಮಾಡಿಕೊಳ್ಳುವುದರಿಂದ ವೇತನ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗಲಿದೆ.
ಪ್ರಸ್ತುತ ನರೇಗಾ ಕೂಲಿ ಹಣವು 316 ರೂಪಾಯಿಗಳಿಗೆ ಹೆಚ್ಚಿಗೆಯಾಗಿರುವುದು ನರೇಗಾ ಕೂಲಿ ಕಾರ್ಮಿಕರಿಗೆ ಸಂತಸದ ಸಂಗತಿ. ಬೇಸಿಗೆಯ ಈ ದಿನಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯುವುದಿಲ್ಲ. ಹಾಗಾಗಿ ನರೇಗಾದಿಂದ ದುಡಿದ ಹಣವನ್ನು ಮಳೆಗಾಲಕ್ಕೆ ಕೃಷಿಗೆ ಬಳಸಿಕೊಳ್ಳಿ ಎಂದು ಸಹಾಯಕ ನಿರ್ದೇಶಕರು ನರೇಗಾ ಕೂಲಿಕಾರ್ಮಿಕರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ ಜಾಗೃತಿ ಮೂಡಿಸಲಾಯಿತು.
ಪಿಡಿಓ ಮಹೇಶ್, ಐಇಸಿ ಸಿದ್ದು ಸತ್ಯಣ್ಣವರ ಬಿಎಫ್ ಟಿ ಮರೇಗೌಡ್ರ, ತಾಪಂ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.