ಕಡ್ಡಾಯವಾಗಿ ಮತ ಚಲಾಯಿಸಲು ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಕರೆ

ವಿಜಯಪುರ:ಮೇ.5: ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಅರ್ಹ ಮತದಾರರು ಮೇ.10 ರಂದು ನಡೆಯುವ ಮತದಾನದಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ತಿಕೋಟಾ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಅವರು ಕರೆ ನೀಡಿದರು.
ತಿಕೋಟಾ ತಾಲೂಕಾ ಪಂಚಾಯತ್ ಹಾಗೂ ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ತಿಕೋಟಾ ನಗರದಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಮತದಾರರು ಯಾವುದೇ ಒತ್ತಡ, ಆಸೆ-ಆಮಿಷಗಳಿಗೆ ಒಳಗಾಗದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು. ಮತದಾನದ ದಿನದಂದು ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಸರತಿ ಸಾಲಿನಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಶೌಚಾಲಯ ಹಾಗೂ ಪ್ರಥಮ ಚಿಕಿತ್ಸೆ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವಂತೆ ಅವರು ಮನವಿ ಮಾಡಿಕೊಂಡರು.
ಮತದಾನ ಪ್ರಮಾಣ ಶೇಕಡಾ ನೂರರಷ್ಟು ಸಾಧಿಸುವ ನಿಟ್ಟಿನಲ್ಲಿ ವಿದ್ಯುನ್ಮಾನ ಮತಯಂತ್ರದ ಮತದಾನ ಜಾಗೃತಿ ರಥವು ನಗರದ ಪ್ರಮುಖ ಬೀದಿಳಲ್ಲಿ, ಮಾರುಕಟ್ಟೆಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.
ಈ ಸಂದರ್ಭದಲ್ಲಿ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕಾಲ್ನಡಿಗೆಯ ಮೂಲಕ ಬಸವೇಶ್ವರ ವೃತ್ತದಿಂದ ಗುರುವಾರದ ಮಾರುಕಟ್ಟೆಯಲ್ಲಿ ಸಂಚರಿಸಿ ಮರಳಿ ಬಸವೇಶ್ವರ ವೃತ್ತದವರೆಗೆ ಕಾಲ್ನಡಿಗೆಯ ಮೂಲಕ ಜಾಗೃತಿ ಮೂಡಿಸಿದರು. ಗುರುವಾರದ ಮಾರುಕಟ್ಟೆಯಲ್ಲಿ ಹಾಗೂ ನಗರದ ಬಸವೇಶ್ವರ ವೃತ್ತದ ಬಳಿ ಬೀದಿ ನಾಟಕ ಪ್ರದರ್ಶನ ಹಾಗೂ ಜಾಗೃತಿ ಗೀತೆಗಳನ್ನು ಬಿತ್ತರಿಸುವ ಮೂಲಕ ಮತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ತಿಕೋಟಾ ತಾಲೂಕು ಪಂಚಾಯತಿಯ ತಾಲೂಕಾ ಯೋಜನಾಧಿಕಾರಿಗಳಾದ ಶ್ರೀಮತಿ ಆಯೇಷಾ ಸಾಲೋಟಗಿ ಹಾಗೂ ತಾಲೂಕು ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ಎಲ್ಲ ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.