ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಿ: ವಿನಯಾ.ಕೆ

ರಾಯಚೂರು,ಮಾ.೧೦- ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಹದಿನೆಂಟು ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾರರ ಯಾದಿಯಲ್ಲಿ ತಮ್ಮ ಹೆಸರನ್ನು ಸೇರಿಸಬೇಕು. ಸರ್ಕಾರಿ ಇಲಾಖೆ ನೌಕರರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ ಅವರು ಸಹ ಮತದಾರ ಪಟ್ಟಿಯಲ್ಲಿ ಹೆಸರನ್ನ ಸೇರ್ಪಡೆ ಮಾಡಿಕೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ವಿನಯಾ.ಕೆ ಅವರು ಹೇಳಿದರು.
ಅವರು ಮಾ.೦೮(ಬುಧವಾರ) ನಗರದ ಪ್ರದೇಶಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಳ್ಲಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಮಗೆ ಮತದಾನದ ಅವಕಾಶವನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. ನಮಗೆ ಕೊಟ್ಟಿರುವಂತಹ ಅವಕಾಶವನ್ನು ನಾವುಗಳು ಮತದಾನದ ದಿನದಂದು ಮತಗಟ್ಟೆಗೆ ಹೋಗಿ ಮತವನ್ನು ಚಲಾಯಿಸಬೇಕು. ಮತದಾನದ ದಿನ ರಜೆ ಇದೆ ಎಂದೂ ತಿಳಿದುಕೊಂಡು ಅನ್ಯ ಕಾರ್ಯಕ್ಕೆ ಹೋಗದೆ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ಬಲಪಡಿಸಬೇಕೆಂದು ತಿಳಿಸಿದರು.
ಇದೇ ವೇಳೆ ಮತದಾರ ಜಾಗೃತಿ ವೇದಿಕೆ ಮತ್ತು ಮತದಾರ ಸಾಕ್ಷರತೆ ಕ್ಲಬ್‌ನ ನೋಡಲ್ ಅಧಿಕಾರಿ ದಂಡಪ್ಪ ಬಿರಾದಾರ ಮಾತನಾಡುತ್ತಾ. ದೇಶದ ಸುಭದ್ರತೆ ಮತದಾನದಲ್ಲಿ ಅಡಗಿದೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನವನ್ನು ಮಾಡಬೇಕು. ಮತದಾನ ಮಾಡುವುದು ಒಂದು ಪವಿತ್ರವಾದ ಕೆಲಸ. ಅದು ನಮ್ಮ ಹಕ್ಕು ಆಗಿದೆ ಎಂದರು.
ಈ ಸಂದರ್ಭದಲ್ಲಿ ಇಲಾಖೆಯ ವಾಹನ ತಪಾಸಣಾಧಿಕಾರಿಗಳಾದ ಸುಬ್ಬಾರೆಡ್ಡಿ, ಎಸ್.ಜಿ ನಾಗವಂದ ಸೇರಿದಂತೆ ಇಲಾಖೆ ಸಿಬ್ಬಂದಿಯವರು ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು. ಇಲಾಖೆ ಅರ್ಜುನ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.