ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿ ಪಾಲಿಸಿ:ಕತ್ತಿ

ಧಾರವಾಡ,ಏ27:ಎಲ್ಲರೂ ಕಡ್ಡಾಯವಾಗಿ ಕೊರೋನಾದ ಮಾರ್ಗಸೂಚಿಗಳ ನಿಯಮಗಳನ್ನು ಪಾಲಿಸಿ ತಪ್ಪದೇ ಲಸಿಕೆಯನ್ನು ಹಾಕಿಸಬೇಕೆಂದು ಸಾಹಿತಿಗಳಾದ ಮಾರ್ತಾಂಡಪ್ಪ ಕತ್ತಿ ಹೇಳಿದರು.
ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಧಾರವಾಡ ಮತ್ತು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದಿಂದ ಹಮ್ಮಿಕೊಂಡ ವಿವಿಧ ನಗರ ಪ್ರದೇಶಗಳಲ್ಲಿ ಕೋವಿಡ್ ಎರಡನೇ ಅಲೆಯ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಒಂದೇ ಸಮನೆ ಏರಿಕೆಯಾಗುತ್ತಿರುವ ಮಹಾಮಾರಿ ಕೊರೊನಾದಿಂದ ಜನರಿಗೆ ದೇವರೇ ದಿಕ್ಕು ಎಂಬತಾಗಿದೆ. ಅದರ ಬದಲು ಸರಕಾರ ವಿಧಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ತಪ್ಪದೇ ಲಸಿಕೆಯನ್ನು ಹಾಕಿಸಿಕೊಂಡರೇ ಕೋವಿಡ್ ತಡೆಗಟ್ಟಲು ಸಹಕಾರ ಮಾಡಿದಂತಾಗುತ್ತದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ, ಸಾಹಿತಿಗಳಾದ ಮಾರ್ತಾಂಡಪ್ಪ ಎಮ್ ಕತ್ತಿ ಹೇಳಿದರು.
ವಿವಿಧ ನಗರದಲ್ಲಿರುವ ಜನರಿಗೆ ಅರಿವು ಮೂಡಿಸಿ ಆರೋಗ್ಯದ ಕಡೆ ಗಮನ ಹರಿಸಲು ತಿಳಿಸುತ್ತಾ ಮನೆಯಿಂದ ಹೊರಗೆ ಹೋದಾಗ ಮಾಸ್ಕ, ಸಮಾಜಿಕ ಅಂತರ ಮತ್ತು ಸ್ಯಾನಿಟೈಜರ ಬಳಕೆ ಮಾಡುವುದು,ಮನೆಗೆ ಬಂದಾಗ ಮತ್ತು ಮನೆಯಲ್ಲಿರುವಾಗ ಆದಷ್ಟು ಸೋಪು ಬಳಕೆ ಮಾಡುವುದು, ನಿತ್ಯ ಹಣ್ಣು ತರಕಾರಿಗಳನ್ನು ಉಪ್ಪು,ಅರಸಿಣದಿಂದ ತೊಳೆದು ಬಳಸಲು ಸೂಚಿಸಿದರು.
ನಿತ್ಯ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಜನರಲ್ಲಿ ನಡುಕ ಉಂಟುಮಾಡಿದೆ. ಈ ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಅಕ್ಷರಶಃ ರುದ್ರನರ್ತನ ಮಾಡುತ್ತಿದೆ. ಇದರಿಂದಾಗಿ ಸಾವು ಮತ್ತು ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದೆ. ಸೋಂಕು ಹೆಚ್ಚಳವಾಗುತ್ತಿರುವ ಪರಿಗೆ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಆಮ್ಲಜನಕ, ಲಸಿಕೆ, ಹಾಸಿಗೆ ಸಿಗದೆ ಸೋಂಕಿತರು ಮತ್ತು ಅವರ ಕುಟುಂಬದವರ ಆರ್ತನಾದ ಮುಗಿಲು ಮುಟ್ಟಿದೆ ಹಾಗಾಗಿ ಮುನ್ನೇಚ್ಚರಿಕೆ ಮೊದಲ ಹೆಜ್ಜೆಯಾಗಿ ಜಾಗೃತಿಯಿಂದ ಇರುವುದು ಉತ್ತಮ ಪರಿಹಾರ ಎಂದು ಹೇಳಿದರು.
ಡಾ.ಉಮೇಶ ಹಳ್ಳಿಕೇರಿ ಮಾತನಾಡಿ ಮತ್ತೊಂದೆಡೆ ರಾಜ್ಯ ಸರ್ಕಾರಗಳು ಜನರು ಕೋವಿಡ್ ನಿಯಮ ಪಾಲಿಸುತ್ತಿಲ್ಲ ಎಂದು ಹೇಳುತ್ತಿವೆ. ಇದರಿಂದಾಗಿ ಸೋಂಕಿಗೆ ತುತ್ತಾದ ಜನ ಸಾಮಾನ್ಯರೂ ಸೇರಿದಂತೆ, ಮಧ್ಯಮ ವರ್ಗದ ಜನರಿಗೆ ದೇವರೇ ದಿಕ್ಕು ಎನ್ನುವಂತಾಗಿದೆ. ದೇವರ ಮೇಲೆ ಭಾರ ಹಾಕುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ದೇಶ ಇಂದು ವಿಶ್ವದಲ್ಲಿ ಹೊಸದಾಖಲೆ ಬರೆದಿದೆ.
ಈ ಮೂಲಕ ಅತಿ ಹೆಚ್ಚಿನ ಮಂದಿಗೆ ಸೋಂಕು ಕಾಣಿಸಿಕೊಂಡ ಅಮೇರಿಕಾವನ್ನು ಭಾರತ ಹಿಂದಿಕ್ಕಿದೆ. ಈಗಲಾದರೂ ಎಚ್ಚರಗೊಂಡು ಸರಕಾರದ ನಿಯಮ ಪಾಲಿಸಲು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ರೆಡ್ ಕ್ರಾಸ್ ವತಿಯಿಂದ ಜನರಲ್ಲಿ ಮನವಿ
ಮಾಡಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಖಜಾಂಚಿ ಪ್ರೇಮಾನಂದ ಶಿಂಧೆ, ಸುರೇಶ ಬೆಟಗೇರಿ, ಎಮ್ ಎಸ್ ಫರಾಸ್, ಶ್ರೀಶೈಲ ಚಿಕನಳ್ಳಿ, ವಿಜಯಲಕ್ಷ್ಮಿ ಶೆಟ್ಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.