ಕಡೇಚೂರು:ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಚರಂಡಿ

ಸೈದಾಪುರ:ಜೂ.16:ಇಲ್ಲಿಗೆ ಸಮೀಪದ ಕಡೇಚೂರು ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಚರಂಡಿ ಮೇಲಿನ ಸ್ಲ್ಯಾಬ್ ಮುರಿದು ಬಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಕೂಡ ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ಲ್ಯಾಬ್ ಒಳಗಿರುವ ಕಬ್ಬಿಣದ ಕಂಬಿಗಳು ಆಚೆ ಬಂದಿವೆ. ಇದರಿಂದ ರಾತ್ರಿ ಸಮಯದಲ್ಲಿ ಈ ರಸ್ತೆ ಮೂಲಕ ಹಾದು ಹೋಗುವ ಪ್ರಯಾಣಿಕರು ಮತ್ತು ವಾಹನ ಸವಾರರು ಭಯದಲ್ಲಿ ದಾಟುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ವಾಹನಗಳು ಚರಂಡಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ಇನ್ನು ಚಿಕ್ಕ ಮಕ್ಕಳು, ವಯೋವೃದ್ಧರು ಚರಂಡಿಯನ್ನು ದಾಟಲು ಆಲೋಚನೆ ಮಾಡುವಂತಾಗಿದೆ. ನಿತ್ಯ ಈ ರಸ್ತೆ ಮೂಲಕ ಮಾವಿನಳ್ಳಿ, ಬೊಮ್ರಾಲ್ದೊಡ್ಡಿ ಗ್ರಾಮಗಳಿಗೆ ಸಂಚರಿಸುವ ದ್ವಿಚಕ್ರ, ತ್ರಿಚಕ್ರ, ಕಾರು, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳು ಹರಸಾಹಸ ಪಟ್ಟು ದಾಟಿಕೊಂಡ ಹೋಗಬೇಕಾಗಿದೆ. ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಸಮಸ್ಯೆಯನ್ನು ಪರಿಹರಿಸದ ಅಭಿವೃದ್ಧಿ ಅಧಿಕಾರಿಗಳು ಬೇಜವಬ್ದಾರಿತನಕ್ಕೆ ನಿದರ್ಶನವಾಗಿದೆ ಎಂದು ಗ್ರಾಮದ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಮುಂದಾಗುವ ಅನಾಹುತವನ್ನು ತಪ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ಸ್ಲ್ಯಾಬ್ ದುರಸ್ತಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಗ್ರಾಮದ ರಾಜು ಪೊರ್ಲಾ ಅವರು ಒತ್ತಾಯಿಸಿದರು.