ಕಡೆಕಾರು ರಂಜಿತಾ ಹತ್ಯೆ ಪ್ರಕರಣ: ಆರೋಪಿಗೆ ಜೀವಿತಾವಧಿ ಜೈಲುಶಿಕ್ಷೆ

ಉಡುಪಿ, ಸೆ.16: ಏಳು ವರ್ಷಗಳ ಹಿಂದೆ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಡೆಕಾರು ಗ್ರಾಮದ ಪಟೇಲ್‌ ತೋಟ ಎಂಬಲ್ಲಿ ನಡೆದ ರಂಜಿತಾ (19) ಕೊಲೆ ಪ್ರಕರಣದ ಆರೋಪಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ನಿನ್ನೆ ಆದೇಶ ನೀಡಿದೆ

ಕಡೆಕಾರ್ ಗ್ರಾಮದ ಪಟೇಲ್‌ತೋಟ ನಿವಾಸಿ ಯೋಗೀಶ್ (32) ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಈತ ತನ್ನ ನೆರೆಮನೆಯ ವಿದ್ಯಾರ್ಥಿನಿ ರಂಜಿತಾಳನ್ನು ಮದುವೆ ಮಾಡಿಕೊಳ್ಳಲು ಇಷ್ಟಪಟ್ಟು, ದಾರಿಯಲ್ಲಿ ಹೋಗುವಾಗ ತೊಂದರೆ ಕೊಡುತ್ತಿದ್ದನು. ಇದನ್ನು ವಿರೋಧಿಸಿದ ರಂಜಿತಾಳಿಗೆ ಆತ ಜೀವ ಬೆದರಿಕೆ ಹಾಕಿದ್ದನು. ಇದರ ವಿರುದ್ಧ ರಂಜಿತಾ 2013ರ ಸೆ.29ರಂದು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದೇ ದ್ವೇಷದಲ್ಲಿ ಯೋಗೀಶ್ 2013ರ ನ.27ರಂದು ಬೆಳಗ್ಗೆ 9.30ರ ಸುಮಾರಿಗೆ ನೆರೆಮನೆಯ ಗೆಳೆತಿಯ ಜೊತೆ ಮಾತನಾಡುತ್ತಿದ್ದ ರಂಜಿತಾಳಿಗೆ ಹಿಂಬದಿಯಿಂದ ಚೂರಿಯಲ್ಲಿ ತಿವಿದು ಕೊಲೆ ಮಾಡಿದ್ದನು. ಈ ಬಗ್ಗೆ ಆರೋಪಿ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 302 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಆಗಿನ ಉಡುಪಿ ವೃತ್ತ ನಿರೀಕ್ಷಕ ಮಾರುತಿ ಜಿ. ನಾಯಕ್, ಆರೋಪಿಯನ್ನು 2013ರ ಡಿ.1ರಂದು ಬಂಧಿಸಿ, 2014ರ ಫೆ. 14ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಹಲವು ಸಾಕ್ಷಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ., ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಸೆ.14ರಂದು ಆರೋಪಿಯನ್ನು ದೋಷಿ ಎಂಬುದಾಗಿ ಘೋಷಿಸಿ, ಸೆ.16ರಂದು ಶಿಕ್ಷೆ ಪ್ರಕಟಿ ಸುವುದಾಗಿ ಆದೇಶ ನೀಡಿದರು. ಅದರಂತೆ ನಿನ್ನೆ ನ್ಯಾಯಾಧೀಶ ಸುಬ್ರಹ್ಮಣ್ಯ ಜಿ., ಆರೋಪಿಗೆ ಜೀವಿತಾವಧಿ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದರು. ಜಾಮೀನು ಸಿಗದೆ ಜೈಲಿನಲ್ಲಿಯೇ ಇದ್ದ ಆರೋಪಿಯನ್ನು ಶಿಕ್ಷೆ ಪ್ರಮಾಣ ಪ್ರಕಟಿಸುವ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಭಿಯೋಜನೆ ಪರವಾಗಿ ಜಿಲ್ಲಾ ಹಿರಿಯ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದಿಸಿದ್ದರು.