ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಹೆಚ್ಚಿನ ಜಾಗೃತಿ


ಧಾರವಾಡ,ಏ.2: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಯೋಜನೆಯಡಿ ಜಿಲ್ಲೆಯಾದ್ಯಂತ ಮತದಾನ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕಿದೆ. ಕಳೆದ ಬಾರಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಕೇಂದ್ರಗಳಲ್ಲಿ ಈ ಬಾರಿ ಹೆಚ್ಚಿನ ಜಾಗೃತಿ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ .ಟಿ.ಕೆ. ಅವರು ಹೇಳಿದರು.

ಜಿಲ್ಲಾಪಂಚಾಯತ್ ಸಭಾಭವನದಲ್ಲಿ ಜರುಗಿದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರ ಸಕ್ರೀಯವಾಗಿ ಪಾಲ್ಗೊಂಡು ಜಿಲ್ಲೆಯ ಎಲ್ಲೆಡೆ ಹೆಚ್ಚಿನ ಮತದಾನವಾಗುವಂತೆ ಅರಿವು ಮೂಡಿಸಲು ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಶ್ರಮಿಸಬೇಕೆಂದರು.

ಗ್ರಾಮಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ, ತಾಲೂಕಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮತದಾರರ ಗಮನ ಸೆಳೆಯುವ ಹಾಗೂ ಕಡ್ಡಾಯವಾಗಿ ಮತದಾನ ಮಾಡುವಲ್ಲಿ ಮತದಾರರ ಮನವೋಲಿಸುವ ನಿಟ್ಟಿನಲ್ಲಿ ವಿಶೇಷವಾದ ವಿನೂತನ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವಂತೆ ಅವರು ತಿಳಿಸಿದರು.

ಈ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಆ ವ್ಯಾಪ್ತಿಯಲ್ಲಿ ಹೆಚ್ಚಿನ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಮನೆ ಮನೆಗೆ ತೆರಳಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಮಹಿಳಾ ಸಂಘ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘಗಳು, ಮತದಾನ ಅರಿವು ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ದ್ವಿಚಕ್ರ ವಾಹನಗಳ ರ್ಯಾಲಿ, ಮ್ಯಾರಥಾನ ವಿವಿಧ ಸ್ಪರ್ಧೆಗಳು, ಕ್ಯಾಂಡಲ್ ಲೈಟ್, ಸ್ಟಾರ್, ಕ್ಯಾಂಪೇನರ್, ಬೃಹತ್ ಮಾನವ ಸರಪಳಿ, ಬೀದಿನಾಟಕ, ಫ್ಯಾಶನ್ ಷೋ, ಪೇಟಿಂಗ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಆಡಿಯೋ ಜಿಂಗಲ್ ಪ್ರಸಾರ, ಬ್ಯಾನರ್ ಹಾಗೂ ವಿವಿಧ ಮಾಧ್ಯಮಗಳಲ್ಲಿ ಪ್ರಸಾರ ಸೇರಿದಂತೆ ಹಲವಾರು ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.

ಆಧುನಿಕ ವಿಜ್ಞಾನದ ಯುಗದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ಮತದಾನ ಜಾಗೃತಿ ಕೈಗೊಳ್ಳಬೇಕು. ಸ್ವೀಪ್ ಕುರಿತಾಗಿ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸುವಂತೆ ಹಾಗೂ ಫೇಸಬುಕ್, ವಾಟ್ಸ್‍ಪ್‍ಗಳನ್ನು ಜಾಗೃತಿಗಾಗಿ ಬಳಸುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ಬಸವರಾಜ ಹೆಗ್ಗಾನಾಯಕ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ, ಯೋಜನಾ ನಿರ್ದೇಶಕ ಮೂಗನೂರಮಠ ಸ್ವೀಪ್ ಮುಖ್ಯ ತರಬೇತಿದಾರರಾದ ಕೆ.ಎಂ. ಶೇಖ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ: ಹೆಚ್.ಹೆಚ್. ಕುಕನೂರ, ಡಿಹೆಚ್‍ಓ ಡಾ. ಪಾಟೀಲ ಶಶಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.