ಬೀದರ:ಜೂ.21:ಅರಣ್ಯ ಇಲಾಖೆಯಲ್ಲಿ ನೀಡುವ ಸಾಗುವಾನಿ ಸಸಿಗಳು ಮತ್ತು ಇತರ ಸಸಿಗಳ ಮಾರಾಟ ಬೆಲೆಯನ್ನು ಈ ವರ್ಷದಿಂದ ದಿಢೀರನೆ ಏರಿಸಲಾಗಿದೆ. ಇದರಿಂದ ರೈತರು ಹೊಸ ಗಿಡ ಮರಗಳನ್ನು ಬೆಳೆಸಲು ತೊಂದರೆ ಆಗುತ್ತದೆ. ಆದ್ದರಿಂದ ಈಗಿನ ಹೆಚ್ಚಿಸಿರುವ ಮಾರಾಟದ ನ ದರವನ್ನು ರದ್ದುಪಡಿಸಿ, ಮೊದಲಿನಂತೆ ಕಡಿಮೆ ದರ ದಲ್ಲಿ ನೀಡಬೇಕೆಂದು ಡಾ. ಕೇರ್ ಚಾರಿಟೇಬಲ್ ಟ್ರಸ್ಟ್, ನ್ಯೂ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ಅಖಿಲ ಭಾರತ ವಿಶ್ವವಿದ್ಯಾಲಯ ನೌಕರರ ಒಕ್ಕೂಟ ವತಿಯಿಂದ ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಲಾಗಿದೆ.
ಕೇರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸಿ.ಆನಂದರಾವ್ ಅವರು ಮಾತನಾಡಿ, ಪ್ರತಿ ವರ್ಷ ಅರಣ್ಯ ಇಲಾಖೆ ಯಿಂದ ಸಾಗುವಾನಿ ಸಸಿಗಳು ರೂ. 4 ಗೆ ಒಂದರಂತೆ ದೊರೆಯುತ್ತಿತ್ತು ಆದರೆ 2023 ಸಾಲಿನಲ್ಲಿ 24 ರೂಪಾಯಿಗೆ ಒಂದರಂತೆ ಮಾರಾಟ ದರ ನಿಗದಿಪಡಿಸಲಾಗಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹೊರೆಯಾಗಿ ಹೊಸದಾಗಿ ಗಿಡಮರ ಗಳನ್ನು ನೆಡುವುದಕ್ಕೆ ತೊಂದರೆಯಾಗುತ್ತದೆ. ವಾತಾವರಣವನ್ನು ಹಸಿರೀಕರಣಗೊಳಿಸುವುದು, ಗಿಡ ಮರಗಳನ್ನು ಬೆಳೆಸಿ, ಪರಿಸರ ಉಳಿಸಿ ಎನ್ನುವ ಸರ್ಕಾರದ ಉದ್ದೇಶವನ್ನು ಕಾರ್ಯರೂಪಕ್ಕೆ ತರಬೇಕಾದರೆ, ಅರಣ್ಯ ಇಲಾಖೆಯಿಂದ ಸಸಿಗಳನ್ನು ಅತ್ಯಂತ ಕಡಿಮೆ (ಮೊದಲಿನ ಬೆಲೆಯಲ್ಲಿ)ದರದಲ್ಲಿ ಮಾರಾಟ ಮಾಡಬೇಕು. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಡಾ. ಎಸ್.ಆರ್. ಹಣಮಶೆಟ್ಟಿ, ವೀರಭದ್ರಪ್ಪ ಉಪ್ಪಿನ್, ಸಂಜೀವ್ ಕುಮಾರ್ ಸ್ವಾಮಿ, ಅರವಿಂದ್ ಕುಲಕರ್ಣಿ, ಮತ್ತು ಕೃಷ್ಣ ಬಾವಗಿ ಮುಂತಾದವರು ತಿಳಿಸಿದ್ದಾರೆ.