ಕಡಿಮೆ ಕೃತಿಗಳಿದ್ದರೂ ಬಿ.ಬಿ. ಹೆಂಡಿಯವರು ಜನಮನ್ನಣೆ ಗಳಿಸಿದ ದೊಡ್ಡ ವಿದ್ವಾಂಸ: ಡಾ. ಮೀನಾಕ್ಷಿ ಬಾಳಿ

ಕಲಬುರಗಿ,ಸೆ.9:ಸಾಹಿತ್ಯ ರಚನೆಯಲ್ಲಿ ಕಡಿಮೆ ಕೃತಿಗಳಿದ್ದರೂ ಹೆಚ್ಚಿನ ಮನ್ನಣೆ ಗಳಿಸಿದ್ದ ಬಹುದೊಡ್ಡ ವಿದ್ವಾಂಸರು. ಶಿಸ್ತಿನ ಸಿಪಾಯಿಗಳು, ಸರಳ ಸಜ್ಜನಿಕೆಯ ನಡೆಯೊಂದಿಗೆ ಅಷ್ಟೇ ಸರಳತೆಯ ಸ್ವಭಾವವನ್ನು ಬೆಳೆಸಿಕೊಂಡು ಬಂದಿದ್ದರು ಎಂದು ಹಿರಿಯ ಸಾಹಿತಿ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಡಾ. ಬಿ.ಬಿ. ಹೆಂಡಿಯವರ ಕುರಿತು ಜಿಲ್ಲಾ ಜಾನಪದ ಪರಿಷತ್ತು ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ಜಾನಪದ ವಿದ್ವಾಂಸರ ಬದುಕು ಬರಹ ಸರಣಿ ಉಪನ್ಯಾಸ ಮಾಲಿಕೆಯ ಉದ್ಘಾಟನೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಂಡಿ ಅವರು ರಚಿಸಿದ ಶ್ರೀ ಬಸವಣ್ಣನವರು, ದೀಕ್ಷಾಬೋಧಿ, ಕರ್ನಾಟಕ ಜಾನಪದ ದರ್ಶನ ಮುಂತಾದವು ಶ್ರೇಷ್ಠ ಹಾಗೂ ಅದ್ಭುತ ಕೃತಿಗಳಾಗಿವೆ. ಕೃತಿಗಳಲ್ಲಿ ಹೆಚ್ಚಾಗಿ ಸಂಪಾದನೆಯ ಕೃತಿಗಳಾಗಿದ್ದವು ಎಂದರು.
ಹೆಂಡಿಯವರು ವಿಜಯಪುರ ಜಿಲ್ಲೆಯ ನಿಡಗುಂದಾದವರಾಗಿದ್ದು, 1925ರಂದು ಜನಿಸಿದರು. ಅವರೊಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಇಡೀ ಬದುಕು ಕಟ್ಟುನಿಟ್ಟಿನಿಂದ ಬದ್ಧತೆ ಹಾಗೂ ಭರವಸೆಯನ್ನು ಕಳೆದುಕೊಳ್ಳದೇ ಜೀವನಗೈದವರು. ಅವರು ಈ ವಿಶ್ವವಿದ್ಯಾಲಯಕ್ಕೆ ಬರುವ ಮೊದಲು ಧಾರವಾಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಕಲಬುರ್ಗಿಗೆ ಬಂದರು. ತಮ್ಮ ನಡೆ, ನುಡಿಯ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದವರು. ಅವರನ್ನು ಭೇಟಿ ಮಾಡಲು ಬಂದರೆ ಅವರು ಅನುಮತಿ ಕೊಟ್ಟಾಗ ಭೇಟಿಯಾಗಬೇಕಾಗುತ್ತಿತ್ತು. ಅವರನ್ನು ಭೇಟಿ ಮಾಡಲು ಅನೇಕ ವಿದ್ವಾಂಸರು ಬಂದು ಚರ್ಚೆ ಮಾಡುತ್ತಿದ್ದರು. ಅವರ ಹೆಸರಿನಲ್ಲಿ ಬಸಲಿಂಗಪ್ಪ ಬಸ್ಸಪ್ಪ ಹೆಂಡಿ ಪೂರ್ಣ ಹೆಸರಾಗಿತ್ತು. ಅಂತಹ ವ್ಯಕ್ತಿಗಳ ಚರಿತ್ರೆ ನಮಗೆಲ್ಲರಿಗೂ ಮಾದರಿಯಾಗಿದೆ. ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಒಳ್ಳೆಯದು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಕಲಾ ನಿಕಾಯದ ಡೀನ್ ಡಾ. ರಮೇಶ್ ರಾಠೋಡ್ ಅವರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ್ ಅವರು ಮಾತನಾಡಿ, ಜನಪದ ಒಂದು ಮೌಲ್ಯಗಳಿಂದ ಒಡಗೂಡಿದ ಬದುಕಾಗಿತ್ತು. ಶುದ್ಧ ಆಚಾರ, ವಿಚಾರ ಇಟ್ಟುಕೊಂಡು ತಮ್ಮ ಬದುಕು ಹಸನಗೊಳಿಸಿಕೊಳ್ಳುತ್ತಿದ್ದರೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ್ ಅವರು ಮಾತನಾಡಿ, ಆಧುನಿಕ ನಾಗರಿಕತೆಯ ಬೆಳವಣಿಗೆಯ ಭರದಲ್ಲಿ ನಶಿಸಿ ಹೋಗುತ್ತಿರುವ ಜನಪದ ಕಲೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಒಂದು ಸ್ಥಾಯಿಸ್ಥಾನ ಒದಗಿಸಿಕೊಡುವುದೇ ಪರಿಷತ್ತಿನ ಮುಖ್ಯ ಉದ್ದೇಶವಾಗಿದೆ. ಜಾನಪದವನ್ನು ಉಳಿಸಿ ಬೆಳೆಸಲು ಎಲ್ಲರ ಸಹಕಾರ, ಪ್ರೀತಿ, ವಿಶ್ವಾಸ ಅಗತ್ಯವಾಗಿದೆ. ಅಂತೆಯೇ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು ಮತ್ತು ನಿರ್ದೇಶಕ ಡಾ. ಎಚ್.ಟಿ. ಪೋತೆ ಅವರು ತಾವು ಇರದಿದ್ದರೂ ಸಹ ಎಲ್ಲ ರೀತಿಯಿಂದಲೂ ಕಾರ್ಯಕ್ರಮಕ್ಕೆ ತುಂಬಾ ಸಹಕಾರ ಮಾಡಿದ್ದಾರೆ ಎಂದರು.
ಡಾ. ವಿಶಾಲಾಕ್ಷಿ ಕರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಭೀಮಾಶಂಕರ್ ಅವರು ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ್ ರೋಣದ್ ಅವರು ವಂದಿಸಿದರು. ಡಿ.ಪಿ. ಸಜ್ಜನ್ ಅವರು ಸ್ವಾಗತಿಸಿದರು. ಸಮಾರಂಭದಲ್ಲಿ ಸಾಹಿತಿಗಳಾದ ಡಾ. ಶ್ರೀಶೈಲ್ ನಾಗರಾಳ್, ಡಾ. ಎಂ.ಬಿ. ಕಟ್ಟಿ, ಡಾ. ಗವಿಸಿದ್ಧ ಪಾಟೀಲ್, ಡಾ. ಸಂಗಮೇಶ್ ಹಿರೇಮಠ್, ಸಂಗೀತ ಉಪನ್ಯಾಸಕ ಸಿದ್ದಾರ್ಥ ಚಿಮ್ಮಾಯಿದಲಾಯಿ, ಶಿವಾನಂದ್ ಮಠಪತಿ, ನಿಂಗಣ್ಣ ಉದನೂರ್ ಮುಂತಾದವರು ಉಪಸ್ಥಿತರಿದ್ದರು.