ಕಡಲ್ಕೊರತಕ್ಕೆ ಶಾಶ್ವತ ಕ್ರಮ: ಸಿಸಿಪಾ ಭರವಸೆ

ಬೆಂಗಳೂರು, ಫೆ. ೨೨- ರಾಜ್ಯದ ಕರಾವಳಿ ತೀರ ಪ್ರದೇಶಗಳಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕ್ರಮ ಕೈಗೊಳ್ಳುವ ಸಂಬಂಧ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ವಿಧಾನ ಪರಿಷತ್ತಿನಲ್ಲಿಂದು ಹೇಳಿದರು.
ಮಳೆಗಾಲದಲ್ಲಿ ಆಘಾತ ಸಂಭವಿಸುವ ಕಡಲ್ಕೊರೆತ ತಪ್ಪಿಸಲು ತಜ್ಞರ ಸಮಿತಿ ರಚನೆ ಮಾಡುವುದೂ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿ.ಎಂ. ಫಾರೂಕ್ ಅವರು ಕೇಳಿದ ಪ್ರಶ್ನೆಗೆ ಪೂರಕವಾಗಿ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಳೆಗಾಲದಲ್ಲಿ ಎದುರಾಗುವ ಕಡಲ್ಕೊರೆತ ಸವಾಲಿನಿಂದ ಕೂಡಿದೆ. ಅದನ್ನು ಸರಿಪಡಿಸಿ ಸ್ಥಳೀಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಸ್ತೆ ನಿರ್ಮಾಣ
ಕಡಲ್ಕೊರೆತ ಆಗದಂತೆ ನೋಡಿಕೊಳ್ಳುವುದು ಬಂದರು ಇಲಾಖೆಯ ಕರ್ತವ್ಯ. ಅವರು ಕಡಲ್ಕೊರೆತ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡರೆ ಕರಾವಳಿ ತೀರ ಪ್ರದೇಶದಳಲ್ಲಿ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸಿದ್ದವಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಬಿ.ಎಂ. ಫಾರೂಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಬಂದರು ಇಲಾಖೆ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಅವರು ಕಡಲ್ಕೊರೆತ ತಪ್ಪಿಸಲು ಕ್ರಮ ಕೈಗೊಂಡರೆ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಲ್ಲಾಳ ತಾಲ್ಲೂಕಿನ ಉಲ್ಲಾಳ-ಸೋಮೇಶ್ವರ ಕಡಲತೀರ ಪ್ರದೇಶದಲ್ಲಿ ಪ್ರತಿ ವರ್ಷ ತೀವ್ರ ಕಡಲ್ಕೊರೆತದಿಂದ ರಸ್ತೆ ಸಂಪರ್ಕ ಹಾನಿಯಾಗಿರುವುದು ಸರ್ಕಾರದ ಗಮನದಲ್ಲಿದೆ. ೨.೬ ಕಿಲೋ ಮೀಟರ್ ಉದ್ದ ರಸ್ತೆ ನಿರ್ಮಾಣ ಮಾಡುವುದು ಸವಾಲಿನ ಕೆಲಸವಾಗಿದ್ದು, ಬಂದರು ಇಲಾಖೆ ಜತೆ ಸಮಾಲೋಚಿಸಲಾಗುತ್ತಿದೆ ಎಂದು ತಿಳಿಸಿದರು.
ಸಮುದ್ರ ತೀರ ಪ್ರದೇಶದಲ್ಲಿ ಸಮುದ್ರದ ಜತೆ ಜತೆಗೆ ಸಾಗುವ ರಸ್ತೆಗಳ ಅಭಿವೃದ್ಧಿ ಮಾಡುವುದು ಹೆಚ್ಚು ಸವಾಲಿನಿಂದ ಕೂಡಿದೆ. ಆದರೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.