ಕಡಲೆ ಬೆಳೆಗೆ ಕೃಷಿ ಅಧಿಕಾರಿಗಳ ಭೇಟಿ:ಪರಿಶೀಲನೆ

ಬಳ್ಳಾರಿ, ನ.8: ಸಮೀಪದ ಅನ್ನಪೂರ್ಣೇಶ್ವರಿ ಕ್ಯಾಂಪ್ ನ ಬಸವರಾಜ ಎಂಬ ರೈತನ ಕಡಲೆ ಬೆಳೆಗೆ ಕುರುಗೋಡು ಕೃಷಿ ಅಧಿಕಾರಿ ಎಂ.ದೇವರಾಜ್ ಇಂದು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಅವರು ಮಾತನಾಡಿ, ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು ರೈತರು ಸಂತಸಗೊಂಡಿದ್ದಾರೆ. ಇದರಿಂದ ಕಡಲೆ ಬೆಳೆ ಕೂಡ ಸಮೃದ್ದ ಬೆಳೆ ಬರುವ ನಿರೀಕ್ಷೆ ಇದೆ ಎಂದರು. ಆದರೆ ಈ ಬೆಳೆಗೆ ತೇವಾಂಶ ಹೆಚ್ಚಾಗಿರುವುದರಿಂದ ಅಲ್ಲಲ್ಲಿ ಸಸಿಗಳು ಒಣಗಿ ಹೋಗುವುದು. ಕಂಡುಬಂದಿದೆ. ಇದು ನೆಟೆ ರೋಗ ಎಂದು ರೈತರಿಗೆ ತಿಳಿಸಿದರು.ಇದರ ನಿವಾರಣೆಗೆ ಮಣ್ಣಿನ ತೇವಾಂಶವನ್ನು ರೈತರು ಕಡಿಮೆ ಮಾಡಬೇಕು, ಒಂದು ಬಾರಿ “ಹೆಡೆ” ಹೊಡೆಯಬೇಕು, ಜೊತೆಗೆ “ಮೆಟಲಕ್ಸಿಲ್” ರಿಡೋಮಿಲ್ ಎಂ ಜೆಡ್ ಕ್ರಿಮಿನಾಶಕವನ್ನು ಸಿಂಪಡಿಸಿದರೆ ನೆಟೆ ರೋಗ ನಿವಾರಣೆಯಾಗುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ಜೆ.ಅರುಣಾ, ರೈತ ಶಂಕ್ರಪ್ಪ, ಇತರರು ಇದ್ದರು.