ಕಡಲೆಕಾಯಿ ಪರಿಷೆ ಕಳೆಗಟ್ಟಿದ ಗ್ರಾಮೀಣ ಜಾತ್ರೆ

ಬೆಂಗಳೂರು, ನ.೨೯- ಎಲ್ಲೂ ನೋಡಿದರೂ ರಾಶಿ ರಾಶಿ ಬಡವರ ಬಾದಾಮಿ, ವ್ಯಾಪಾರದಲ್ಲಿ ಮುಳುಗಿದ ವ್ಯಾಪಾರಿಗಳು, ಅಲಂಕಾರಗೊಂಡು ಕಂಗೊಳಿಸುತ್ತಿರುವ ದೊಡ್ಡ ಗಣಪತಿ ದೇವಾಲಯ. ಎಲ್ಲೆಡೆಯೂ ಮನಸೂರೆಗೊಳ್ಳುವ ಗ್ರಾಮೀಣ ಜಾತ್ರೆಯ ಸಂಭ್ರಮ…!
ಇದು ರಾಜಧಾನಿ ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಕಂಡು ಬಂದ ದೃಶ್ಯ ವೈಭವ.
ಮುಜರಾಯಿ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಕಡಲೆಕಾಯಿ ಪರಿಷೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ, ನಂದಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು.
ಇಲ್ಲಿನ ಬೀದಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ರಾಶಿಗಳು ಗಮನ ಸೆಳೆಯುತ್ತಿವೆ. ಕಡಲೆಕಾಯಿ ಖರೀದಿಸಲು ಭಾರಿ ಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದಾರೆ.
ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ. ಪಾದಚಾರಿ ಮಾರ್ಗಗಳು ಮಕ್ಕಳ ಆಟದ ಸಾಮಾಗ್ರಿಗಳು, ಅಲಂಕಾರಿಕ ವಸ್ತುಗಳು, ತಿಂಡಿ ತಿನಿಸುಗಳ ವ್ಯಾಪಾರಿಗಳು ಸೇರಿದಂತೆ ವಿವಿಧ ವ್ಯಾಪಾರಿಗಳ ತಾಣವಾಗಿ ಮಾರ್ಪಟ್ಟಿದೆ.
ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಸೇರಿದಂತೆ ತಮಿಳುನಾಡು, ಆಂಧ್ರ ಹೀಗೆ ನಾನಾ ಭಾಗಗಳ ರೈತರು ಮಳಿಗೆಗಳನ್ನು ಹಾಕಿದ್ದಾರೆ.
ಭದ್ರತೆ: ಇನ್ನೂ, ಪರಿಷೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಬಿಬಿಎಂಪಿ ನಿರ್ಬಂಧ ಹೇರಿದೆ. ಪರಿಷೆಗೆ ಮೂರು ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ, ಸೂಕ್ತ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಕೂಡ ಎಚ್ಚರಿಕೆ ವಹಿಸಿದೆ.
ಪರಿಷೆ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ದಟ್ಟಣೆ ನಿಯಂತ್ರಣಕ್ಕಾಗಿ ವಾಹನಗಳ ಸಂಚಾರ ಮಾರ್ಗಗಳನ್ನು ಡಿ.೧ ರವರೆಗೆ ಬದಲಾವಣೆ ಮಾಡಲಾಗಿದೆ.
ಅಲ್ಲದೆ, ಕೋವಿಡ್ ಕಾರಣಕ್ಕೆ ಕಳೆದ ವರ್ಷ ಪರಿಷೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದ, ಕಡಲೆಕಾಯಿ ವ್ಯಾಪಾರ ವಹಿವಾಟು ನಡೆದಿರಲಿಲ್ಲ. ನವಂಬರ್ ತಿಂಗಳಲ್ಲಿ ಕಾರ್ತಿಕ ಮಾಸದ ಕೊನೆ ಸೋಮವಾರ ಕಡಲೆಕಾಯಿ ಪರಿಷೆ ಆಚರಿಸಲಾಗುತ್ತದೆ. ಪರಂಪರಾನುಗತವಾಗಿ ನಡೆಯುತ್ತಾ ಬಂದಿರುವ ಈ ಪರಿಷೆಯಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುತ್ತಾರೆ.
ದರ ಎಷ್ಟು?
ಪರಿಷೆಯಲ್ಲಿ ಒಂದು ಸೇರು ಹಸಿ ಕಡಲೆಕಾಯಿ ೨೫ರಿಂದ ೩೦ ರೂ. ಹಾಗೂ ಹುರಿದ ಕಡಲೆಕಾಯಿಗೆ ೩೦ರಿಂದ ೩೫ ರೂ. ದರ ನಿಗದಿಪಡಿಸಲಾಗಿದೆ. ಇನ್ನು ಬೇಯಿಸಿದ, ಉಪ್ಪು ಹಚ್ಚಿದ, ಮಸಾಲೆ ಕಡಲೆಕಾಯಿ ದರ ಸ್ವಲ್ಪ ಹೆಚ್ಚಿದೆ.
ಮಾಸ್ಕ್ ಮೇಲೆ ನಿಗಾ
ಸದ್ಯ ಕೊರೊನಾ ಪ್ರಕರಣ ಕಡಿಮೆ ಹಿನ್ನೆಲೆ ಕಡಲೆಕಾಯಿ ಪರಿಷೆ ಆಯೋಜನೆ ಮಾಡಲಾಗಿದೆ. ವ್ಯಾಪಾರಿ ಮತ್ತು ಸಾರ್ವಜನಿಕರಿಗೆ ಕೊರೋನಾ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದ್ದು, ಮಾಸ್ಕ್ ಧರಿಸಿದವರಿಗೆ ದಂಡ ವಿಧಿಸಲು ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ.
ಚಾಲನೆ..!
ಮುಜರಾಯಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಐತಿಹಾಸಿಕ ಬಸವನಗುಡಿ ಕಡಿಲೆಕಾಯಿ ಪರಿಷೆಗೆ ಶಾಸಕ ರವಿಸುಬ್ರಮಣ್ಯ, ಉದಯ್ ಬಿ. ಗರುಡಾಚಾರ್ ಚಾಲನೆ ನೀಡಿದರು.
ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತರು ಗೌರವ್ ಗುಪ್ತ, ವಲಯ ಆಯುಕ್ತ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತ ಜಗದೀಶ್ ನಾಯಕ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಷೆಗೆ ಐದಾರು ಲಕ್ಷ ಮಂದಿ..!
ಗ್ರಾಮೀಣ ಸಂಸ್ಕೃತಿಯಿಂದ ವಿಮುಖರಾಗುತ್ತಿರುವ ನಾಗರಿಕರಿಗೆ ಹಾಗೂ ಯುವ ಜನರಿಗೆ ನಾಡಿನ ಸಂಸ್ಕೃತಿ ಹಾಗೂ ಕಲೆಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಪರಿಷೆ ಹಮ್ಮಿಕೊಳ್ಳಲಾಗಿದ್ದು, ಐದಾರು ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.
-ರವಿಸುಬ್ರಮಣ್ಯ, ಶಾಸಕ