ಕಡಲೆಕಾಯಿ ಪರಿಷೆಗೆ ಬಂದು ಸಿಕ್ಕಿಬಿದ್ದ ಕುಖ್ಯಾತ ರೌಡಿ ಪೃಥ್ವಿ

ಬೆಂಗಳೂರು,ನ.೨೩- ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಂದಿದ್ದ ಕೊಲೆ, ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿ ಪೃಥ್ವಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಡಲೆಕಾಯಿ ಪರಿಷೆಯಲ್ಲಿ ದೇವರ ದರ್ಶನಕ್ಕೆ ಬಂದಿದ್ದ ರೌಡಿಶೀಟರ್ ಪೃಥ್ವಿ ಹಾಗೂ ಆತನ ಸಹಚರ ಭೂಷಣ್‌ನನ್ನು ಬಸವನಗುಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ರತಿವರ್ಷ ಕಡಲೆಕಾಯಿ ಪರಿಷೆಗೆ ಬಂದು ದೇವರ ದರ್ಶನ ಪಡೆಯುತಿದ್ದ ರೌಡಿ ಪೃಥ್ವಿ ಈ ವರ್ಷ ಕೂಡ ದೇವಸ್ಥಾನಕ್ಕೆ ಬರುವುದು ಖಚಿತವಾಗಿತ್ತು. ಇದನ್ನು ತಿಳಿದು ಪೊಲೀಸರು ಪೃಥ್ವಿ ಬರುತ್ತಾನೆಂದು ಹೊಂಚು ಹಾಕಿ ಕಾದು ಕುಳಿತಿದ್ದರು.
ಅದರಂತೆ ಕಡಲೆಕಾಯಿ ಪರಿಷೆಯಲ್ಲಿ ರೌಡಿ ಶೀಟರ್ ಪೃಥ್ವಿ, ಸಹಚರ ಭೂಷಣ್‌ನನ್ನು ಬಂಧಿಸಿದ್ದಾರೆ. ಬಸವನಗುಡಿ, ವಿಲ್ಸನ್ ಗಾರ್ಡನ್ ಸೇರಿ ಹಲವು ಠಾಣೆಯಲ್ಲಿ ಪೃಥ್ವಿ ವಾಂಟೆಡ್ ಆಗಿದ್ದ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.