ಕಡಲೆಕಾಯಿ ಆರೋಗ್ಯದ ಗುಟ್ಟು

ಕಡಲೆಕಾಯಿ ಬಾಯಿಗೆ ರುಚಿ, ದೇಹಕ್ಕೂ ಹಿತ. ಚಳಿಗಾಲದ ಈ ಅವಧಿಯಲ್ಲಿ ಕಡಲೇಕಾಯಿ ದೇಹಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ. ಎದುರಿನಲ್ಲಿಟ್ಟ ಕಡ್ಲೆಕಾಯಿ ಮುಗಿಯುವ ತನಕ ಯಾವುದಕ್ಕೂ ಬಿಡುವಿಲ್ಲ. ಶೇಂಗಾದ ಆ ರುಚಿ ನಾಲಗೆಯಲ್ಲಿ ನಲಿಯುವಾಗ ಜಗತ್ತೇ ಮುಳುಗಿ ಹೋದರೂ ಗಮನಕ್ಕೆ ಬಾರದು. ಕಡಲೇಕಾಯಿಯ ಮಾಯೆಯೇ ಅಂಥದ್ದು. ಹಸಿಯಾಗಲಿ, ಹುರಿದದ್ದೇ ಆಗಲಿ, ಬೇಯಿಸಿದ್ದೇ ಆಗಲಿ? ಕಡಲೆಕಾಯಿಯ ರುಚಿಗೆ ಸಾಟಿ ಬೇರಿಲ್ಲ.
ರುಚಿಯಷ್ಟೇ ಅಲ್ಲ, ಆರೋಗ್ಯದ ವಿಚಾರದಲ್ಲಿ ಶೇಂಗಾ ದೇಹಕ್ಕೆ ಪೂರಕ. ಸಿರಿವಂತರು ಬಾದಾಮಿ ಕೊಂಡು ತಿಂದರೆ ಬಡವರು ಕಡ್ಲೇಕಾಯಿ ಚಪ್ಪರಿಸುತ್ತಾರೆ. ಆದ್ದರಿಂದಲೇ ಇದು ಬಡವರ ಬಾದಾಮಿ. ಗಾಂಧೀಜಿಯವರೂ ಕಡಲೇಕಾಯಿಯನ್ನು ಬಹು ಪ್ರಿಯವಾಗಿ ಮೆಚ್ಚುತ್ತಿದ್ದರು. ಇದರಲ್ಲಿ ಅಧಿಕವಾಗಿರುವ ಪೋಷಕಾಂಶಗಳೇ ಇದಕ್ಕೆ ಬಾದಾಮಿಗೆ ಸರಿಗಟ್ಟುವ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.
ಪ್ರೊಟೀನ್‌ನ ಆಗರ: ಶೇಂಗಾ ಪ್ರೋಟಿನ್‌ನ ಆಗರ. ಚಳಿಗಾಲದಲ್ಲಿ ಇದರ ಸೇವನೆಯಿಂದ ದೇಹಕ್ಕೆ ಬೇಕಾದ ಕೊಬ್ಬಿನಾಂಶ ಸಿಗುತ್ತದೆ. ಇದನ್ನು ಹಸಿಯಾಗಿ, ಹುರಿದು, ಬೇಯಿಸಿ ತಿನ್ನಬಹುದು. ಅಥವಾ ಚಿಕ್ಕಿ, ಉಂಡೆ, ಬರ್ಫಿ, ಚಟ್ನಿ ಪುಡಿ. ಬೆಣ್ಣೆ ಮಾಡಿ ಸೇವಿಸಬಹುದು. ಶೇಂಗಾ ಬೀಜದಲ್ಲಿ ಫಾಲೆಟ್ ಅಂಶ ಅತ್ಯಧಿಕವಾಗಿದೆ. ಮಹಿಳೆಯರಿಗೆ ವಿಶೇಷವಾಗಿ ಗರ್ಭಿಣಿಯರಿಗೆ ಒಳ್ಳೆಯದು. ಅಲ್ಲದೆ ಕಾಲು ಕಪ್ ಶೇಂಗಾ ಬೀಜ ಸೇವನೆಯಿಂದ ದೇಹಕ್ಕೆ ಬೇಕಾಗಿರುವ ಒಟ್ಟು ಮ್ಯಾಂಗನೀಸ್‌ನ ಶೇ. ೩೫ ಭಾಗವನ್ನು ಪಡೆದುಕೊಳ್ಳಬಹುದು. ಮ್ಯಾಂಗನೀಸ್ ದೇಹದ ಚಯಾಪಚಯ ಕ್ರಿಯೆಗೆ, ಕ್ಯಾಲ್ಷಿಯಂ ಉತ್ಪತ್ತಿಗೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟದ ನಿಯಂತ್ರಣಕ್ಕೆ ಅತ್ಯಗತ್ಯವಾಗಿದೆ. ಶೇಂಗಾದಲ್ಲಿ ಟ್ರೈಪ್ಟಾಫನ್ ಎಂಬ ಅಂಶವಿದೆ. ಇದು ಮೆದುಳಿನಲ್ಲಿ ನಡವಳಿಕೆಯನ್ನು ನಿಯಂತ್ರಿಸುವ ಸಿರೊಟಿನ್ ಉತ್ಪತ್ತಿಗೆ ಅತ್ಯಗತ್ಯವಾಗಿರುವ ಅಮಿನೊ ಆ?ಯಸಿಡ್ ಆಗಿದೆ. ಆದ್ದರಿಂದ ಖಿನ್ನತೆ ಮುಂತಾದ ಸಮಸ್ಯೆಯಿದ್ದವರಿಗೆ ಶೇಂಗಾ ಬೀಜದ ಸೇವನೆ ಒಳ್ಳೆಯದು.
ಶೇಂಗಾವನ್ನು ಬ್ರೈನ್ ಫುಡ್ ಎಂದು ಕರೆಯಬಹುದು. ಯಾಕೆಂದರೆ ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಬಿ೩ ಅಥವಾ ನಿಯಾಸಿನ್ ಎಂಬ ಅಂಶ ಇದ್ದು ಇದು ಮೆದುಳನ್ನು ಚುರುಕಾಗಿಸುತ್ತದೆ. ಇದು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಕೂಡಾ ಸಹಕಾರಿಯಾಗಿದೆ. ಇದರಲ್ಲಿರುವ ತಾಮ್ರದಂಶ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ. ಶೇಂಗಾವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಹೃದಯಾಘಾತ ಇತ್ಯಾದಿ ಸಮಸ್ಯೆಗಳನ್ನೂ ತಪ್ಪಿಸಬಹುದು. ಆದ್ದರಿಂದ ವಾರಕ್ಕೆ ನಾಲ್ಕು ದಿನ ಒಂದು ಹಿಡಿ ಶೇಂಗಾ ಬೀಜವನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಕೆಲವು ಸಂಶೋಧನೆಗಳ ಪ್ರಕಾರ ಶೇಂಗಾವನ್ನು ಸೇವಿಸುತ್ತಿದ್ದರೆ ಆಲ್‌ಜೈಮರ್ ಮುಂತಾದ ಸಮಸ್ಯೆಯನ್ನೂ ತಡೆಗಟ್ಟಬಹುದು. ಇದರಲ್ಲಿರುವ ನಿಯಾಸಿನ್ ಅಂಶವೇ ಇದಕ್ಕೆ ಕಾರಣ. ಇಷ್ಟು ಮಾತ್ರವಲ್ಲ, ಶೇಂಗಾ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನೂ ಕಡಿಮೆ ಮಾಡಿಕೊಳ್ಳಬಹುದು.