ಕಡಬ: ಖಾಸಗಿ ಸಂಸ್ಥೆಯಿಂದ ಕಳ್ಳತನ ಮಾಡಿದ ಬಾಲಕ ಕಡಬ ಪೊಲೀಸ್ ವಶಕ್ಕೆ

ಕಡಬ, ಮಾ.೨೬- ಕಡಬದ ಖಾಸಗಿ ಸಂಸ್ಥೆಯ ಕಛೇರಿಯೊಂದರಿಂದ ಹಣ ಕಳವುಗೈದು ಪರಾರಿಯಾಗಿದ್ದ ಬಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.
ಈ ಬಾಲ ಆರೋಪಿಯನ್ನು ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮದ ಬಾನಡ್ಕ ನಿವಾಸಿ ಕೃಷ್ಣಪ್ಪ ಎಂಬವರ ಪುತ್ರ ದೀಕ್ಷಿತ್ (೧೫) ಎಂದು ಗುರುತಿಸಲಾಗಿದೆ. ಈತ ಏನೆಕಲ್ಲು ಭಾಗದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾನೆ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ದೀಕ್ಷಿತ್ ಮಂಗಳವಾರ ಮಧ್ಯಾಹ್ನದ ವೇಳೆ ಕಡಬದ ಸೇವಾ ಕೇಂದ್ರ ಒಂದಕ್ಕೆ ಬಂದು ಡ್ರವರ್‌ನಲ್ಲಿದ್ದ ಹಣವನ್ನು ಲಪಟಾಯಿಸಿದ್ದ, ಆ ಕಛೇರಿಯಲ್ಲಿದ್ದ ಸಿಬ್ಬಂದಿ ಊಟ ಮಾಡಿ ಕೈತೊಳೆಯಲು ಹೋಗಿ ಹಿಂದೆ ಬರುವಷ್ಟರಲ್ಲಿ ಸಣ್ಣಮೊತ್ತದ ಹಣ ತೆಗೆದು ಕಿಸೆಯಲ್ಲಿರಿಸಿ ಪಕ್ಕದ ಡ್ರಮ್‌ನಲ್ಲಿದ್ದ ನೀರು ತೆಗೆದು ಕುಡಿಯುವ ನಾಟವಾಡುತ್ತಿರುವಾಗ ಕಛೇರಿ ಸಿಬ್ಬಂದಿ ಆಗಮಿಸಿದ್ದರು. ನಾನು ನೀರು ಕುಡಿಯಲು ಬಂದಿರುವುದಾಗಿ ಹೇಳಿದ ದೀಕ್ಷಿತ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆಗ ಆತನ ಬಗ್ಗೆ ಯಾರಿಗೂ ಸಂಶಯ ಬರಲಿಲ್ಲ. ಈತನ ಕಳ್ಳತನ ಮಾತ್ರ ಯಾರಿಗೂ ಗೊತ್ತಾಗಿರಲಿಲ್ಲ. ಇದಾದ ಸ್ವಲ್ಪ ಸಮಯದ ಬಳಿಕ ಕಛೇರಿಗೆ ಬಂದ ಪಿಗ್ಮಿ ಸಂಗ್ರಾಹಕರಿಗೆ ಹಣ ನೀಡಲು ಡ್ರವರ್ ಎಳೆದು ನೋಡಿದಾಗ ಅದರಲ್ಲಿದ್ದ ಹಣ ಮಾಯವಾಗಿತ್ತು. ಬಳಿಕ ಹತ್ತಿರದ ಸಿಸಿ ಕ್ಯಾಮರಾದಲ್ಲಿ ನೋಡಿದಾಗ ಹುಡುಗನ ಚಲನವಲನ ಗೊತ್ತಾಗಿದೆ. ಆದರೆ ಆತ ಮಾತ್ರ ಅಷ್ಟೊತ್ತಿಗಾಗಲೇ ನಾಪತ್ತೆಯಾಗಿದ್ದ. ಕಳಕೊಂಡಿರುವುದು ಸಣ್ಣ ಮೊತ್ತವಾಗಿದ್ದರಿಂದ ಸಂಸ್ಥೆಯ ಮಾಲಕರು ಈ ಪ್ರಕರಣವನ್ನು ಅಷ್ಟೊಂದು ಗಂಭಿರವಾಗಿ ಪರಿಗಣಿಸಿರಲಿಲ್ಲ.
ಗ್ರಹಚಾರ ಕೆಟ್ಟ ದೀಕ್ಷಿತ್ ಗುರುವಾರ ಮತ್ತೆ ಕಡಬಕ್ಕೆ ಬಂದಿದ್ದಾನೆ. ಈತ ದೂರದಿಂದಲೇ ಬರುವುದನ್ನು ಗಮನಿಸಿದ್ದ ಹಣ ಕಳವಾಗಿದ್ದ ಸಂಸ್ಥೆಯ ಪಕ್ಕದ ಕಛೇರಿಯ ಸಿಬ್ಬಂದಿ ಹಣ ಕಳವಾದ ಸಂಸ್ಥೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಪ್ಲಾನ್ ಮಾಡುವಷ್ಟರಲ್ಲಿ ಆತ ಅಲ್ಲಿ ಬಾರದೆ ಕಟ್ಟಡದ ಮಾಲಕರ ಕಛೇರಿಯ ಬಳಿ ಹೋಗಿ ನೀರು ಕುಡಿಯುವ ನಾಟಕವಾಡಿ ಅಲ್ಲಿ ಹಣ ಎಗರಿಸಲು ವಿಫಲನಾಗಿ ಬೇರೆ ಕಛೇರಿಗಳತ್ತ ಮುಖ ಮಾಡಿದ್ದ. ಅಲ್ಲಿ ಇಲ್ಲಿ ಕಛೇರಿಯಿಂದ ಕಛೇರಿಗೆ ತೆರಳಿ ಇಣುಕಿ ನೋಡಿ ಬರುತ್ತಿರುವುದನ್ನು ಗಮನಿಸಿದ ಕೆಲವು ಸಿಬ್ಬಂದಿಗಳ ಆತನನ್ನು ಹಿಡಿದು ಕಡಬ ಪೊಲೀಸರಿಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಈ ಪುಡಿಗಳ್ಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಆತ ಕಡಬದಲ್ಲಿ ಮಾತ್ರವಲ್ಲದೆ ಆತನ ಊರು ಏನೆಕಲ್ಲಿನಲ್ಲು ಸಣ್ಣಪುಟ್ಟ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮಾಹಿತಿ ಲಭ್ಯವಾಗಿದೆ. ಈತ ಏನೆಕಲ್ಲಿ ಸರ್ಕಾರಿ ಶಾಲಾ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ಆತ ತರಗತಿಗೂ ಸರಿಯಾಗಿ ಹೋಗದೆ ತಿರುಗುತ್ತಿದ್ದ, ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುವ ಈತನ ಪೋಷಕರ ಬುದ್ದಿಮಾತಿಗೆ ಸೊಪ್ಪು ಹಾಕದೆ, ಕಳ್ಳತನದಂತಹ ನೀಚ ಕೃತ್ಯವನ್ನು ಮುಂದುವರಿಸಿದ್ದ ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಆತಿಥ್ಯ ನೀಡಿ ವಿಚಾರಣೆ ನಡೆಸಿರುವ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಆತನನ್ನು ಅವನ ಪೋಷಕರಿಗೆ ಒಪ್ಪಿಸಿದ್ದಾರೆ.